ಬೆಂಗಳೂರು: ಇದೇ ಮೊದಲ ಬಾರಿಗೆ ಬಸವನಗುಡಿ ಕಡಲೆಕಾಯಿ ಪರಿಷೆಯ ಮಳಿಗೆಗಳಲ್ಲಿ ವ್ಯಾಪಾರ ಮಾಡುವವರಿಂದ ಯಾವುದೇ ರೀತಿಯ ಸುಂಕ ಪಡೆಯದೇ ಇರಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ. ನವೆಂಬರ್ 25 ಮತ್ತು 26ರಂದು ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯಲಿರುವ ಪರಿಷೆಯ ಪೂರ್ವಭಾವಿ ಸಭೆಯಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನಿರ್ದೇಶನದಂತೆ ಸುಂಕ ಪಡೆಯದಿರಲು ನಿರ್ಧರಿಸಲಾಗಿದೆ.
ಪ್ರತೀ ವರ್ಷ ಟೆಂಡರ್ ಕರೆಯಲಾಗುತ್ತಿತ್ತು. ಟೆಂಡರ್‌ದಾರರು ಅಂಗಡಿಗಳಿಂದ ಬಲವಂತವಾಗಿ ಹೆಚ್ಚು ಸುಂಕ ವಸೂಲಿ ಮಾಡುತ್ತಿದ್ದರು ಎನ್ನುವ ಆರೋಪ ಕೇಳಿಬರುತ್ತಿತ್ತು. ಆದ್ದರಿಂದ ಈ ಬಾರಿ ಸುಂಕ ವಸೂಲಾತಿ ಟೆಂಡರ್ ಕೈಬಿಡಲು ಹಾಗೂ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡದಂತೆ ಸೂಚಿಸಲಾಗಿದೆ. ಒಂದು ವೇಳೆ ಯಾರಾದರೂ ಅನಧಿಕೃತವಾಗಿ ಸುಂಕ ವಸೂಲಿ ಮಾಡಿದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬಿಬಿಎಂಪಿ ವತಿಯಿಂದ ಮಾರ್ಷಲ್‌ಗಳನ್ನು ನಿಯೋಜಿಸಲು ಮತ್ತು ಪರಿಷೆಗೆ ಪಾಲ್ಗೊಳ್ಳುವ ಜನರ ಆರೋಗ್ಯ ದೃಷ್ಟಿಯಿಂದ ತುರ್ತು ಚಿಕಿತ್ಸೆ ವಾಹನ ಹಾಗೂ ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ದೊಡ್ಡ ಗಣಪತಿ ದೇವಸ್ಥಾನದ ರಸ್ತೆಯಿಂದ ರಾಮಕೃಷ್ಣ ಆಶ್ರಮದ ರಸ್ತೆಯವರೆಗೆ ಮತ್ತು ಗೋಕುಲೆ ಇನ್‌ಸ್ಟಿಟ್ಯೂಟ್ ರಸ್ತೆಯ ಮಧ್ಯದಲ್ಲಿ ಬ್ಯಾರಿಕೇಡ್, ಸುತ್ತ ಮುತ್ತ ಹೆಚ್ಚಿನ ಸಿಸಿಟಿವಿ, ಬೀದಿ ದೀಪಗಳ ಅಳವಡಿಕೆ ಹಾಗೂ ದುರಸ್ತಿಯಲ್ಲಿರುವ ವಿದ್ಯುತ್ ದೀಪಗಳನ್ನು ಸರಿಪಡಿಸಬೇಕು ಎಂದು ಬಿಬಿಎಂಪಿ ಹಾಗೂ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.