ಹಾವೇರಿ: ಅಂಬೇಡ್ಕರ್ ಅವರು ಸಂಸತ್ತಿಗೆ ಬಂದರೆ ಮೀಸಲಾತಿ ಜಾರಿಗೊಳಿಸುತ್ತಾರೆ ಎಂದು ಕಾಂಗ್ರೆಸ್ ನವರು ಅವರನ್ನು ಸೊಲಿಸಿದರು. ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಶಿಗ್ಗಾವಿಯಲ್ಲಿ ಇಂದು ಹಾವೇರಿ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿ, ಅಂಬೇಡ್ಕರ್ ಅವರು ಮಿಸಲಾತಿ ಜಾರಿಗೆ ಮುಂದಾದಾಗ ಆಗಿನ ಕಾಂಗ್ರೆಸ್ ನಾಯಕರು ಮೀಸಲಾತಿ ಒಪ್ಪಿಕೊಂಡಿರಲಿಲ್ಲ. ಮಹಾತ್ಮಾಗಾಂಧಿ ಜೊತೆ ಮಾತುಕತೆ ಮಾಡಿ ಪೂನಾ ಒಪ್ಪಂದಂತೆ ಮೀಸಲಾತಿ ಜಾರಿ ಮಾಡಲು ತೀರ್ಮಾನಿಸಲಾಯಿತು. ಈ ದೇಶದ ತುಳಿತಕ್ಕೊಳಗಾದ ಸಮುದಾಯಕ್ಕೆ ಸಮಾನತೆ ನ್ಯಾಯ ಕೊಡದಿದ್ದರೆ ಯಾತಕ್ಕಾಗಿ, ಯಾರಿಗಾಗಿ ಈ ಸ್ವಾತಂತ್ರ್ಯ ಎಂದು ಪ್ರಶ್ನಿಸಿದರು.
ಮೀಸಲಾತಿ ಜಾರಿಗೆ ಬಂದರೂ ಅದರ ಅನಷ್ಟಾನ ಕೊರತೆಯಿಂದ ಸರಿಯಾಗಿ ಜಾರಿಗೆ ಬರಲಿಲ್ಲ. ಅಂಬೇಡ್ಕರ್ ಅವರು ಸಂಸತ್ತಿಗೆ ಬಂದರೆ ಎಲ್ಲಿ ಮೀಸಲಾತಿ ಜಾರಿಗೊಳಿಸುತ್ತಾರೊ ಎಂದು ಕಾಂಗ್ರೆಸ್ ನವರು ಎಸ್ ಜೆ ಪಾಟೀಲ್ ಅವರನ್ನು ನಿಲ್ಲಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದರು. ಈಗಲೂ ಮಾತೆತ್ತಿದರೆ ಅಂಬೇಡ್ಕರ್, ಸಂವಿಧಾನ ಎನ್ನುತ್ತಾರೆ. ಅಂಬೇಡ್ಕರ್ ಅವರು ನಿಧನ ಹೊಂದಿದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ, ಕಾಂಗ್ರೆಸ್ ನವರಿಗೆ ಅಂಬೇಡ್ಕರ್ ಅವರ ಹೆಸರು ಹೇಳಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಸೋಲಿಲ್ಲದ ಸರದಾರ ಬಾಬು ಜಗಜಿವನ್ ರಾಮ್ ಅವರು ಹಸಿರು ಕ್ರಾಂತಿ ಮಾಡಿದರು. ರಕ್ಷಣಾ ಸಚಿವರಾಗಿ ಭಾರತದ ಸೈನ್ಯವನ್ನು ಬಲಿಷ್ಠಗೊಳಿಸಿದವರು ಬಾಬು ಜಗಜೀವನ ರಾಮ್ ಅವರು, ಅವರನ್ನು ಮರು ಆಯ್ಕೆಗೆ ಕಾಂಗ್ರೆಸ್ ಅವಕಾಶ ಕೊಡಲಿಲ್ಲ. ಇಂದಿರಾಗಾಂಧಿಯವರು ಬಾಬು ಜಗಜೀವನ್ ರಾಮ್ ಅವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿ ದೊಡ್ಡ ಫೋಟೊ ಹಾಕಿ ಚುನಾವಣೆಯಲ್ಲಿ ಗೆದ್ದು ಬಂದರು, ಎಲ್ಲರೂ ಬಾಬು ಜಗಜೀವನ್ ರಾಮ್ ಅವರು ಪ್ರಧಾನಿಯಾಗುತ್ತಾರೆ ಎಂದುಕೊಂಡರು, ಆದರೆ, ಚುನಾವಣೆ ಗೆದ್ದ ನಂತರ ಇಂದಿರಾಗಾಂಧಿ ಪ್ರಧಾನಿಯಾದರು ಎಂದು ಹೇಳಿದರು.
ಈಗ ರಾಹುಲ್ ಗಾಂಧಿ ಮೀಸಲಾತಿಯನ್ನು ತೆಗೆದು ಹಾಕಲಾವುದು ಎಂದು ಅಮೇರಿಕೆಗೆ ಹೋಗಿ ಹೇಳಿದ್ದಾರೆ. ಅವರು ದಲಿತ ವಿರೋಧಿ ಎನ್ನುವುದನ್ನು ಅಲ್ಲಿ ಹೊಗಿ ಹೇಳಿದ್ದಾರೆ. ಯಾರು ನಿಮ್ಮ ಪರವಾಗಿ ಕೆಲಸ ಮಾಡುತ್ತಾರೆ ಅವರಿಗೆ ಬೆಂಬಲ ಕೊಡಿ, ಪರಮೇಶ್ವರ, ಮಹಾದೇವಪ್ಪ ಅವರ ಕ್ಷೇತ್ರಕ್ಕಿಂತ ಹೆಚ್ಚು ಅಂಬೇಡ್ಕರ್ ಭವನ, ಅಂಬೇಡ್ಕರ್ ಮೂರ್ತಿ ನಮ್ಮ ಕ್ಷೇತ್ರದಲ್ಲಿ ನಿರ್ಮಿಸಿದ್ದೇನೆ. ನಾನು ಈ ನಾಯಕರ ಮೇಲಿನ ಗೌರವಕ್ಕೆ ಈ ಕೆಲಸ ಮಾಡಿದ್ದೇನೆ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರು ವಾಲ್ಮೀಕಿ ನಿಗಮದ ಸುಮಾರು 190 ಕೋಟಿ ರೂ. ನುಂಗಿದ್ದಾರೆ. ಇದರಿಂದ ಆ ಸಮುದಾಯಕ್ಕೆ ಅನ್ಯಾಯವಾಗಿದೆ. ಅಂಬೇಡ್ಕರ್ , ಬಾಬು ಜಗಜೀವನ್ ರಾಮ್ ಅಭಿವೃದ್ಧಿ ನಿಗಮದಿಂದ ಯಾರಿಗೂ ಹಣ ಬಿಡುಗಡೆಯಾಗಿಲ್ಲ ಎಂದರು.
ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳ ಮಾಡಲು ಅನೇಕ ದಿನಗಳಿಂದ ಹೋರಾಟ ನಡೆಯುತ್ತಿತ್ತು. ನನಗೆ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಹೇಳಿದರು. ನಾನು ಜೇನುಗೂಡಿಗೆ ಕೈ ಹಾಕಿ ಜೇನು ನನಗೆ ಕಡಿದರೂ ಆ ಸಮುದಾಯಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಮೀಸಲಾತಿ ಹೆಚ್ಚಳ ಮಾಡಿದ್ದೇನೆ. ಒಳ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನ ನಾಯಕರೊಬ್ಬರು ಸುಪ್ರೀಂ ಕೋರ್ಟ್ ಗೆ ಹೋಗಿದ್ದರು. ನಾನು ಎಲ್ಲ ಒಳಸಮುದಾಯಗಳಿಗೆ ಸಾಮಾಜಿಕವಾಗಿ ನ್ಯಾಯ ಕೊಡಲು ಒಳ ಮೀಸಲಾತಿ ಜಾರಿ ಮಾಡಿದೆ. ಇದರಿಂದ ಸುಮಾರು ಎರಡುವರೆ ಸಾವಿರ ಮಕ್ಕಳಿಗೆ ಹೆಚ್ಚುವರಿಯಾಗಿ ಇಂಜಿನೀಯರಿಂಗ್ ಸೀಟು ಸಿಕ್ಕಿದೆ. ನಾನೂರಕ್ಕೂ ಹೆಚ್ಚು ಮೆಡಿಕಲ್ ಸೀಟು ಸಿಕ್ಕಿದೆ. ಇದರಿಂದ ನನ್ನ ಸ್ವಂತ ಮಕ್ಕಳಿಗೆ ಎಂಜನೀಯರಿಂಗ್, ಮೆಡಿಕಲ್ ಸೀಟು ಸಿಕ್ಕಷ್ಟು ಖುಷಿ ಇದೆ. ಇದು ನಾವು ನಡೆದು ಬಂದ ದಾರಿ, ಈ ಸಮುದಾಯದ ಜೊತೆಗೆ ಜೀವನ ಪರಿಯಂತೆ ಗಂಧದ ಕೊರಡಿನಂತೆ ಜೀವನ ತೇಯಲು ನಾನು ಸಿದ್ದನಿದ್ದೇನೆ. ಅಧಿಕಾರ ಶಾಸ್ವತ ಅಲ್ಲ, ನಾನು ಆತ್ಮ ಸಾಕ್ಷಿಗೆ ತಕ್ಕ ತೀರ್ಮಾನ ತೆಗೆದುಕೊಂಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಇಡೀ ರಾಜ್ಯದ ಎಸ್ಸಿ ಎಸ್ಟಿ ಸಮುದಾಯಕ್ಕೆ ಅನುಕೂಲವಾಗುವ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಯಾರೇ ಮಂತ್ರಿ, ಸಿಎಂ ಬರಲಿ ಅವರು ತಮ್ಮ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕೇಳಿ, ದಲಿತ ಸಮುದಾಯದ ಜನರು ಯಾರ ಮಾತೂ ಕೇಳದೆ ಆತ್ಮಸಾಕ್ಷಿಯ ಮತ ನೀಡಿ ಭರತ್ ಬೊಮ್ಮಾಯಿಯನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಡಿಸಿಎಂ ಹಾಗೂ ಸಂಸದ ಗೋವಿಂದ ಕಾರಜೋಳ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಹಾಜರಿದ್ದರು.