image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ನಾಟಕದಲ್ಲಿ ಜಪಾನ್ ಮಾದರಿ ಅಭಿವೃದ್ಧಿ: ಹೂಡಿಕೆ, ಸಾರಿಗೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಸಿಎಂ ಒತ್ತು

ಕರ್ನಾಟಕದಲ್ಲಿ ಜಪಾನ್ ಮಾದರಿ ಅಭಿವೃದ್ಧಿ: ಹೂಡಿಕೆ, ಸಾರಿಗೆ ಹಾಗೂ ತ್ಯಾಜ್ಯ ನಿರ್ವಹಣೆಗೆ ಸಿಎಂ ಒತ್ತು

ಬೆಂಗಳೂರು: ನಗರ ಸಾರಿಗೆ, ತ್ಯಾಜ್ಯ ವಿಲೇವಾರಿ, ನಗರಾಭಿವೃದ್ಧಿ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಜಪಾನಿನ ಉತ್ತಮ ವ್ಯವಸ್ಥೆಗಳನ್ನು ಕರ್ನಾಟಕದಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಸೌಧದ 'ಸಂಗಮ' ಸಭಾಂಗಣದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಮೂರು ದಿನಗಳ ಜಪಾನ್ ಪ್ರವಾಸದ ವಿವರಗಳನ್ನು ಹಂಚಿಕೊಂಡರು.

ಜಪಾನಿನ ಸಮಯ ಪರಿಪಾಲನೆ, ಶಿಸ್ತು ಮತ್ತು ಬದ್ಧತೆ ಅನುಕರಣೀಯವಾಗಿದ್ದು, ಅಲ್ಲಿನ ಮಾದರಿಗಳ ಕಾರ್ಯಸಾಧ್ಯತೆ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಯೋಜನೆ ರೂಪಿಸಲಾಗುವುದು ಎಂದು ಸಿಎಂ ಹೇಳಿದರು. ಮುಂದಿನ ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶಕ್ಕೆ ಪೂರ್ವಭಾವಿಯಾಗಿ ವಿವಿಧ ದೇಶಗಳಲ್ಲಿ ರೋಡ್ ಶೋ ನಡೆಸಲಾಗುತ್ತಿದ್ದು, ಪೂರ್ವ ಏಷ್ಯಾದ ಹಲವು ದೇಶಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸಿವೆ. ಜಪಾನ್ ವಿದೇಶಾಂಗ ಸಚಿವರು ಹಾಗೂ ರಾಯಭಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಸಂಪೂರ್ಣ ಸಹಕಾರದ ಭರವಸೆ ದೊರೆತಿದೆ ಎಂದರು.

ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದು, ಬೆಂಗಳೂರಿನಾಚೆಗೂ ಹೊಸ ಗ್ರೀನ್ ಫೀಲ್ಡ್ ಯೋಜನೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಜಪಾನಿನಲ್ಲಿ ಕಸದಿಂದ ಕನಿಷ್ಠ 24 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಭೇಟಿ ನೀಡಿದ್ದು, ಕೇಂದ್ರ ಸರ್ಕಾರದ ನೆರವಿನೊಂದಿಗೆ ಬೆಂಗಳೂರು, ಹುಬ್ಬಳ್ಳಿ-ಧಾರವಾಡ ಹಾಗೂ ಮೈಸೂರಿನಲ್ಲಿಯೂ ಇಂತಹ ಘಟಕ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಜಪಾನಿನ ಮೆಟ್ರೋ ನಿಲ್ದಾಣಗಳಂತೆ ನಮ್ಮಲ್ಲೂ ನಿಲ್ದಾಣಗಳನ್ನು ವ್ಯವಸ್ಥಿತ ವಾಣಿಜ್ಯ ಕೇಂದ್ರಗಳನ್ನಾಗಿ ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಜಪಾನಿನ 525 ಕಂಪನಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಟೊಯೋಟಾ ಸಂಸ್ಥೆಯು ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಒಲವು ತೋರಿದೆ. ಕವಾಸಕಿ ಹೆವಿ ಇಂಡಸ್ಟ್ರೀಸ್ ಜೊತೆಗಿನ ಒಪ್ಪಂದದಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿಯಲ್ಲಿ 600 ತಾಂತ್ರಿಕ ಉದ್ಯೋಗಗಳು ಸೃಷ್ಟಿಯಾಗಲಿವೆ. ಟೋಕಿಯೋ ಒಲಿಂಪಿಕ್ಸ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿ ಕಾರುಗಳನ್ನು ರಾಜ್ಯದಲ್ಲೇ ಉತ್ಪಾದಿಸಲು ಆಹ್ವಾನ ನೀಡಲಾಗಿದ್ದು, ಇದು ಸ್ಥಳೀಯ ಆಟೋ ಚಾಲಕರಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರವಾಸದ ವೇಳೆ ಒಸಾಕಾ, ನಯೋಗ ನಗರಗಳಿಗೆ ಭೇಟಿ ನೀಡಲಾಗಿದ್ದು, ಪ್ಯಾನಸೋನಿಕ್, ಜೆಎಫ್‌ಸಿ ಸ್ಟೀಲ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳೊಂದಿಗೆ ಸಚಿವ ಎಂ.ಬಿ. ಪಾಟೀಲ್ ಹಾಗೂ ನಿಯೋಗ ಮಹತ್ವದ ಸಭೆ ನಡೆಸಿದೆ. ಹೂಡಿಕೆದಾರರಿಗೆ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ ಎಂದರು.

ತುಮಕೂರಿಗೆ ಮೆಟ್ರೋ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಮೆಟ್ರೋ ವಿಸ್ತರಿಸುವ ಪ್ರಸ್ತಾವವಿದೆ ಎಂದರು. ಇದಕ್ಕೆ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆ ಮಾಡುತ್ತಿಲ್ಲ, ಬದಲಾಗಿ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ