image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕರ್ನಾಟಕದ ಸ್ವಂತ ತೆರಿಗೆ ಆದಾಯದಲ್ಲಿ ಶೇ 16.58ರಷ್ಟು ಪ್ರಗತಿ

ಕರ್ನಾಟಕದ ಸ್ವಂತ ತೆರಿಗೆ ಆದಾಯದಲ್ಲಿ ಶೇ 16.58ರಷ್ಟು ಪ್ರಗತಿ

ಬೆಂಗಳೂರು: 2026-27ನೇ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ ಕರ್ನಾಟಕದ ಆದಾಯ ಸಂಗ್ರಹದಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. ಅಕ್ಟೋಬರ್ 2026ರ ಅಂತ್ಯದ ವೇಳೆಗೆ ರಾಜ್ಯದ ಸ್ವಂತ ತೆರಿಗೆ ಆದಾಯ ₹1,24,986.94 ಕೋಟಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 16.58ರಷ್ಟು ಹೆಚ್ಚಳವಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸರ್ಕಾರ ₹2.20 ಲಕ್ಷ ಕೋಟಿ ಸ್ವಂತ ತೆರಿಗೆ ಆದಾಯ ಸಂಗ್ರಹಿಸುವ ಗುರಿ ಹೊಂದಿದ್ದು, ಅಕ್ಟೋಬರ್ ಅಂತ್ಯದ ವೇಳೆಗೆ ಈ ಗುರಿಯ ಶೇ 56.81ರಷ್ಟು ಸಾಧನೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ರಾಜ್ಯವು ₹1,07,215.22 ಕೋಟಿ ತೆರಿಗೆ ಆದಾಯ ಸಂಗ್ರಹಿಸಿತ್ತು.

ರಾಜ್ಯದ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಕ್ಟೋಬರ್ ಅಂತ್ಯದ ವೇಳೆಗೆ ₹72,689.29 ಕೋಟಿ ಸಂಗ್ರಹವಾಗಿದ್ದು, ವಾರ್ಷಿಕ ಗುರಿಯ ಶೇ 58.15ರಷ್ಟು ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹62,621.17 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಶೇ 16.08ರಷ್ಟು ಏರಿಕೆ ದಾಖಲಾಗಿದೆ. ಅಬಕಾರಿ ಇಲಾಖೆಯು ಮದ್ಯ ಮಾರಾಟ ಮತ್ತು ಪರವಾನಗಿ ಶುಲ್ಕಗಳ ಮೂಲಕ ₹25,857.09 ಕೋಟಿ ಆದಾಯ ಸಂಗ್ರಹಿಸಿದ್ದು, ಇದು ವಾರ್ಷಿಕ ಗುರಿಯ ಶೇ 57.46ರಷ್ಟಾಗಿದೆ.

ಆಸ್ತಿ ಖರೀದಿ ಮತ್ತು ನೋಂದಣಿ ಚಟುವಟಿಕೆಗಳಿಂದ ಮುದ್ರಾಂಕ ಹಾಗೂ ನೋಂದಣಿ ಇಲಾಖೆಯ ಆದಾಯ ₹17,327.55 ಕೋಟಿಗೆ ಏರಿಕೆಯಾಗಿದೆ. ಇಲಾಖೆಯು ವಾರ್ಷಿಕ ಗುರಿಯ ಶೇ 59.75ರಷ್ಟು ಸಾಧಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 17.43ರಷ್ಟು ಬೆಳವಣಿಗೆ ಕಂಡಿದೆ. ಮೋಟಾರು ವಾಹನ ತೆರಿಗೆ ಸಂಗ್ರಹದಿಂದ ₹8,454.36 ಕೋಟಿ (ವಾರ್ಷಿಕ ಗುರಿಯ ಶೇ 54.54) ಬಂದಿದೆ. ಇತರೆ ತೆರಿಗೆ ಮೂಲಗಳಿಂದ ₹658.65 ಕೋಟಿ ಸಂಗ್ರಹವಾಗಿದ್ದು (ವಾರ್ಷಿಕ ಗುರಿಯ ಶೇ 11.98), ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 26.09ರಷ್ಟು ಹೆಚ್ಚಳ ದಾಖಲಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಸ್ವಂತ ತೆರಿಗೆಯೇತರ ಆದಾಯ ₹9,092.25 ಕೋಟಿಗೆ (ವಾರ್ಷಿಕ ಗುರಿಯ ಶೇ 56.83) ಸೀಮಿತವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ₹11,068.72 ಕೋಟಿ ಸಂಗ್ರಹವಾಗಿದ್ದು, ಈ ಬಾರಿ ಶೇ 17.86ರಷ್ಟು ಕುಸಿತ ಉಂಟಾಗಿದೆ. ಖನಿಜ, ಸೇವಾ ಶುಲ್ಕ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಲಾಭಾಂಶ ಸೇರಿದಂತೆ ತೆರಿಗೆಯೇತರ ಆದಾಯ ಮೂಲಗಳಲ್ಲಿನ ಇಳಿಕೆಯತ್ತ ಮುಂದಿನ ತಿಂಗಳುಗಳಲ್ಲಿ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ.

ಮತ್ತೊಂದೆಡೆ, ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆಯ ರೂಪದಲ್ಲಿ ಕರ್ನಾಟಕಕ್ಕೆ ₹37,899.72 ಕೋಟಿ ದೊರೆತಿದ್ದು, ಇದು ವಾರ್ಷಿಕ ಗುರಿಯ ಶೇ 60.11ರಷ್ಟಾಗಿದೆ. ಕಳೆದ ವರ್ಷದ ₹30,450.95 ಕೋಟಿಗೆ ಹೋಲಿಸಿದರೆ ಇದರಲ್ಲಿ ಶೇ 24.46ರಷ್ಟು ಹೆಚ್ಚಳವಾಗಿದೆ. ಕೇಂದ್ರದಿಂದ ವಿವಿಧ ಯೋಜನೆಗಳಿಗೆ ದೊರೆತ ಅನುದಾನ ಹಾಗೂ ಕೊಡುಗೆಗಳ ಮೊತ್ತ ₹6,331.69 ಕೋಟಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಶೇ 0.40ರಷ್ಟು ಬೆಳವಣಿಗೆ ಕಂಡಿದೆ. ಒಟ್ಟಾರೆಯಾಗಿ, ಪ್ರಮುಖ ತೆರಿಗೆ ಮೂಲಗಳು ವಾರ್ಷಿಕ ಗುರಿಯ ಶೇ 55ರಿಂದ 60ರ ನಡುವೆ ಸಾಧನೆ ಮಾಡಿದ್ದು, ಇದೇ ವೇಗ ಮುಂದುವರಿದರೆ 2026-27ನೇ ಸಾಲಿನ ಅಂತ್ಯದ ವೇಳೆಗೆ ಸರ್ಕಾರ ತನ್ನ ಆದಾಯ ಗುರಿಗಳನ್ನು ತಲುಪುವ ನಿರೀಕ್ಷೆಯಿದೆ.

Category
ಕರಾವಳಿ ತರಂಗಿಣಿ