ಬೆಂಗಳೂರು : ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಗೌರವಧನವನ್ನು ₹2,000 ಹೆಚ್ಚಿಸಿ ಒಟ್ಟು ₹10,000 ಕ್ಕೆ ಏರಿಸುವ ಸರ್ಕಾರದ ಪ್ರಸ್ತಾಪಕ್ಕೆ ಕಾರ್ಯಕರ್ತೆಯರು ಒಪ್ಪಿಗೆ ಸೂಚಿಸದ ಕಾರಣ ಮಾತುಕತೆಯಲ್ಲಿ ಯಾವುದೇ ಒಮ್ಮತ ಮೂಡಿಲ್ಲ.
ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಸಚಿವ ಯು.ಟಿ. ಖಾದರ್ ತಮ್ಮ ನಿವಾಸದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದೊಂದಿಗೆ 1 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದರು. ಈ ವೇಳೆ ಸರ್ಕಾರದ ಪ್ರಸ್ತಾಪವನ್ನು ಮುಂದಿಟ್ಟ ಸಚಿವರು, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಅಧಿಕೃತ ಘೋಷಣೆ ಮಾಡುವುದಾಗಿ ಭರವಸೆ ನೀಡಿದರು. ಅಲ್ಲಿಯವರೆಗೆ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.
ಆದರೆ, ಈ ಹೆಚ್ಚಳವು ತಮ್ಮ ನಿರೀಕ್ಷೆಗೆ ತಕ್ಕಂತಿಲ್ಲ ಎಂದು ಕಾರ್ಯಕರ್ತೆಯರು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಕೇವಲ ಮೌಖಿಕ ಭರವಸೆಯ ಬದಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಂಡು ಲಿಖಿತ ರೂಪದಲ್ಲಿ ಆದೇಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಭೆ ವಿಫಲವಾಗಿರುವುದರಿಂದ ಪ್ರತಿಭಟನೆ ಮುಂದುವರಿಯುವ ಸಾಧ್ಯತೆಯಿದ್ದು, ಬೆಳಗಾವಿ ಅಧಿವೇಶನದಲ್ಲಿ ಸರ್ಕಾರ ಯಾವ ನಿರ್ಧಾರ ಪ್ರಕಟಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.