ಬೆಂಗಳೂರು: ಕಾಡುಪ್ರಾಣಿಗಳು ನಾಡಿಗೆ ಬರುತ್ತಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಅರಣ್ಯ ಇಲಾಖೆ ವೈಜ್ಞಾನಿಕ ಅಧ್ಯಯನ ನಡೆಸಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು; ಚಿಕ್ಕಮಗಳೂರು ಜಿಲ್ಲೆಯನ್ನು ರಾಜ್ಯದ ಆನೆ ಪಾರ್ಕ್ ಮಾಡಲು ಹೊರಟಿದ್ದೀರಾ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಡಿನಲ್ಲಿಯೇ ಆನೆಗಳಿಗೆ ಸಾಕಷ್ಟು ಮೇವು, ನೀರು ಮತ್ತು ಸುರಕ್ಷಿತ ವಾಸಸ್ಥಳ ದೊರೆತರೆ ಅವು ನಾಡಿಗೆ ಬರುವ ಅಗತ್ಯವೇ ಇರುವುದಿಲ್ಲ ಎಂದರು. ಅರಣ್ಯ ಪ್ರದೇಶಗಳಲ್ಲಿ ನೀಲಗಿರಿ, ಅಕೇಶಿಯಾ, ಪೈನ್ ಹಾಗೂ ಸಾಗುವಾನಿಯಂತಹ ಮರಗಳನ್ನು ಬೆಳೆಸಿರುವುದರಿಂದ ಆನೆಗಳಿಗೆ ಆಹಾರದ ಕೊರತೆಯಾಗುತ್ತಿದೆ. ಭದ್ರಾ ಅಭಯಾರಣ್ಯವನ್ನು ಆನೆಗಳ ದೊಡ್ಡಿಯನ್ನಾಗಿ ಮಾಡುವ ಬದಲು 12.5 ಲಕ್ಷ ಜನಸಂಖ್ಯೆಯಿರುವ ಜಿಲ್ಲೆಯ ಜನರ ಬದುಕಿನ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಡಿಕೆ, ತೆಂಗು, ಕಬ್ಬು ಹಾಗೂ ಭತ್ತದ ಬೆಳೆ ನಾಶವಾಗುತ್ತಿದ್ದು, ಜೀವಹಾನಿಗೂ ಕಾರಣವಾಗುತ್ತಿದೆ. ಆದರೆ ಸರ್ಕಾರ ನೀಡುವ ಪರಿಹಾರ ಅವೈಜ್ಞಾನಿಕವಾಗಿದೆ ಎಂದು ಅವರು ಆರೋಪಿಸಿದರು. ಇದೇ ವೇಳೆ, ಆನೆ ಹಾವಳಿ ವಿಚಾರವಾಗಿ ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕರು ನೀಡುತ್ತಿರುವ ರಾಜೀನಾಮೆ ಎಚ್ಚರಿಕೆಯನ್ನು 'ರಾಜಕೀಯ ನಾಟಕ' ಎಂದು ಟೀಕಿಸಿದ ಅವರು, ನಿಜವಾದ ಕಾಳಜಿಯಿದ್ದರೆ ನೇರವಾಗಿ ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಲಿ, ಹೇಳಿಕೆಗಳ ಮೂಲಕ ಜನರ ಕಣ್ಣೊರೆಸುವ ತಂತ್ರ ಬೇಡ ಎಂದರು.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಂಟು ದಿನಗಳಿಂದ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕುರಿತು ಮಾತನಾಡಿದ ರವಿ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ₹8,000 ಗೌರವಧನದ ಭರವಸೆಯನ್ನು ಮೂರೂವರೆ ವರ್ಷವಾದರೂ ಈಡೇರಿಸದೆ ಸರ್ಕಾರ ಮಾನವೀಯತೆಯನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದರು. ಬೆಂಗಳೂರು ಹಬ್ಬ ಹಾಗೂ ಮುಖ್ಯಮಂತ್ರಿಗಳ ನಿವಾಸದ ನವೀಕರಣಕ್ಕೆ ಹಣವಿರುವ ಸರ್ಕಾರಕ್ಕೆ ಕಾರ್ಯಕರ್ತೆಯರ ನೆರವಿಗೆ ಬರಲು ಮನಸ್ಸಿಲ್ಲ. ಈ ಕುರಿತು ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಮಧ್ಯಪ್ರವೇಶಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಸೂಚನೆ ನೀಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಸೋಲಿಗೆ ನಿಜವಾದ ಕಾರಣ ಹುಡುಕುವ ಬದಲು ಕಾಂಗ್ರೆಸ್ ಸಂವಿಧಾನಿಕ ಸಂಸ್ಥೆಗಳನ್ನು ಅನುಮಾನಿಸುತ್ತಿದೆ. ಈ ಹಿಂದೆ ಇವಿಎಂ, ನ್ಯಾಯಾಲಯ, ಚುನಾವಣಾ ಆಯೋಗವನ್ನು ದೂರುತ್ತಿದ್ದ ಕಾಂಗ್ರೆಸ್ ಈಗ ಮೆಟಾ ಸಂಸ್ಥೆಯತ್ತ ಆರೋಪ ತಿರುಗಿಸಿದೆ ಎಂದರು. ಮುಂದುವರಿದು, ಶಕ್ತಿ ಯೋಜನೆ ಹಾಗೂ ಇತರ ಉಚಿತ ಯೋಜನೆಗಳ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರ ನೆಪಗಳನ್ನು ಹುಡುಕುತ್ತಿದ್ದು, ಜನರ ಮೇಲೆ ಬೆಲೆ ಏರಿಕೆಯ ಹೊರೆ ಹೇರುತ್ತಿದೆ ಎಂದು ಆರೋಪಿಸಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಖಚಿತವಾಗಿದ್ದು, ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಸೂಕ್ತ ಸಮಯದಲ್ಲಿ ಎನ್‌ಡಿಎ ಪಕ್ಷಗಳು ಒಟ್ಟಾಗಿ ತೀರ್ಮಾನಿಸಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.