ಬೆಂಗಳೂರು: ವಿದೇಶಗಳಿಗೆ ಮೀನು ಹಾಗೂ ಮೀನಿನ ಎಣ್ಣೆ ರಫ್ತು ಮಾಡುವುದರ ಮೇಲೆ ನಿಯಂತ್ರಣ ಹೇರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮೀನು ಹಾಗೂ ಮೀನಿನ ಎಣ್ಣೆ ರಫ್ತುದಾರರ ಸಂಘ (ಐಎಫ್ಎಎಫ್ಇಎ) ಮತ್ತು ನ್ಯಾಷನಲ್ ಫಿಶರ್ಮೆನ್ಸ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿವೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳ ಮೀನು ಮತ್ತು ಮೀನಿನ ಎಣ್ಣೆ ಘಟಕಗಳ ಮಾಲೀಕರ ಸಂಘದ ಪದಾಧಿಕಾರಿಗಳು ಭಾಗವಹಿಸಿ ಈ ಬಗ್ಗೆ ಸಮಾಲೋಚನೆ ನಡೆಸಿದರು. ದೇಶದಲ್ಲಿ ವಾರ್ಷಿಕವಾಗಿ ಸುಮಾರು 3ರಿಂದ 4 ಲಕ್ಷ ಮೆಟ್ರಿಕ್ ಟನ್ ಮೀನು ಉತ್ಪಾದನೆಯಾಗುತ್ತಿದ್ದು, 5 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದೆ. ಆಂಧ್ರಪ್ರದೇಶ ಸರ್ಕಾರದ ಮನವಿಯನ್ನು ಪರಿಗಣಿಸಿ, ಉದ್ದೇಶಿತ ಕಾನೂನಿಗೆ ತಿದ್ದುಪಡಿ ತರುವ ಮೂಲಕ ರಫ್ತಿಗೆ ಕಡಿವಾಣ ಹಾಕಲು ಕೇಂದ್ರ ಮುಂದಾಗಿರುವುದು ಸರಿಯಲ್ಲ ಎಂದು ಸಂಘವು ಆಕ್ಷೇಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಮೊಗವೀರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ, ರಾಜ್ಯದಲ್ಲಿರುವ 8 ಸಾವಿರ ಮೀನುಗಾರಿಕೆ ಬೋಟ್ಗಳಿಗೆ ಡೀಸೆಲ್ ಹಾಗೂ ಸಾಗಾಣಿಕೆ ವೆಚ್ಚ ದುಬಾರಿಯಾಗುತ್ತಿದೆ. ದಿನಕ್ಕೆ ಮೂರು ಟ್ರಿಪ್ ಹೋಗುವ ಬೋಟ್ಗಳಿಗೆ ಸರ್ಕಾರ ನೀಡುವ 9 ಸಾವಿರ ಲೀಟರ್ ಡೀಸೆಲ್ ಸಬ್ಸಿಡಿ ಸಾಕಾಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮೀನುಗಾರರೊಂದಿಗೆ ಚರ್ಚಿಸದೆ ಏಕಾಏಕಿ ರಫ್ತಿಗೆ ನಿರ್ಬಂಧ ಹೇರುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ಹೊರಹಾಕಿದರು.