image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಸ್ತೆ ಅಪಘಾತ ತಡೆಗೆ ಎ.ಐ ಕ್ಯಾಮರಾ, 100 ಹೊಸ ಆಂಬ್ಯುಲೆನ್ಸ್: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

ರಸ್ತೆ ಅಪಘಾತ ತಡೆಗೆ ಎ.ಐ ಕ್ಯಾಮರಾ, 100 ಹೊಸ ಆಂಬ್ಯುಲೆನ್ಸ್: ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್

ಬೆಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತಗಳು ಮತ್ತು ಸಾವು-ನೋವುಗಳನ್ನು ಗಣನೀಯವಾಗಿ ತಗ್ಗಿಸಲು ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ವ್ಯವಸ್ಥೆ, ಅಪಘಾತ ವಲಯಗಳ ವೈಜ್ಞಾನಿಕ ಸುಧಾರಣೆ ಹಾಗೂ ತ್ವರಿತ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ನಡೆದ 24ನೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯ ಬಳಿಕ ಮಾತನಾಡಿದ ಅವರು, ರಸ್ತೆ ಸುರಕ್ಷತೆಯು ಕೇವಲ ಒಂದು ಇಲಾಖೆಯ ಕೆಲಸವಲ್ಲ; ಪೊಲೀಸ್, ಸಾರಿಗೆ, ಆರೋಗ್ಯ, ಲೋಕೋಪಯೋಗಿ, ನಗರಾಭಿವೃದ್ಧಿ ಮತ್ತು ಸ್ಥಳೀಯ ಸಂಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾದ ಮಹತ್ವದ ಸಾರ್ವಜನಿಕ ಜವಾಬ್ದಾರಿಯಾಗಿದೆ ಎಂದರು. ರಾಜ್ಯದಲ್ಲಿ ನೋಂದಾಯಿತ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಿದ್ದರೂ, 2018ರಿಂದ 2025ರ ಅವಧಿಯಲ್ಲಿ ಪ್ರತಿ 10,000 ವಾಹನಗಳಿಗೆ ಸಂಭವಿಸುವ ಅಪಘಾತಗಳ ಪ್ರಮಾಣ ಶೇ. 27ರಷ್ಟು (17.28 ರಿಂದ 12.56ಕ್ಕೆ) ಹಾಗೂ ಮರಣ ದರ ಶೇ. 21ರಷ್ಟು (4.55 ರಿಂದ 3.59ಕ್ಕೆ) ಇಳಿಕೆಯಾಗಿದೆ. ಪ್ರಸಕ್ತ 2026ರ ಜನವರಿಯಿಂದ ಅಕ್ಟೋಬರ್‌ವರೆಗೆ 37,443 ಅಪಘಾತಗಳು ಸಂಭವಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮೃತಪಟ್ಟವರ ಸಂಖ್ಯೆಯಲ್ಲಿ 220ರಷ್ಟು ಇಳಿಕೆ ಕಂಡುಬಂದಿದೆ ಎಂದು ಅವರು ವಿವರಿಸಿದರು.

ಸಂಚಾರ ನಿಯಮ ಉಲ್ಲಂಘನೆ ಮತ್ತು ಹಿಟ್ ಅಂಡ್ ರನ್ ವಾಹನಗಳನ್ನು ಪತ್ತೆಹಚ್ಚಲು ಗುರುತಿಸಲಾದ 87 ಸ್ಥಳಗಳ ಪೈಕಿ 27 ಕಡೆ ಎ.ಐ ಆಧಾರಿತ ಸ್ಮಾರ್ಟ್ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, 20 ಕಡೆ ಇ-ಚಲನ್ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಈಗಾಗಲೇ 6,500 ಚಲನ್‌ಗಳನ್ನು ದಾಖಲಿಸಲಾಗಿದ್ದು, ಉಳಿದ 60 ಸ್ಥಳಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ, ರಾಜ್ಯ ಮತ್ತು ಕೇಂದ್ರ ಸರ್ಕಾರ ಗುರುತಿಸಿರುವ ಅಪಘಾತ ಸಂಭವಿಸುವ ಬ್ಲಾಕ್ ಸ್ಪಾಟ್‌ಗಳಲ್ಲಿ ಸುಧಾರಣಾ ಕಾಮಗಾರಿಗಳನ್ನು ಚುರುಕುಗೊಳಿಸಲಾಗಿದೆ. ಇನ್ನು ಚಾಲನಾ ತರಬೇತಿ ಸಂಸ್ಥೆಗಳ ಮೇಲೆ ಸಾರಿಗೆ ಇಲಾಖೆ ನಿರಂತರ ನಿಗಾ ಇಡಬೇಕು ಹಾಗೂ ಚಾಲನಾ ಪರವಾನಗಿ (DL) ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಗೂ ಹೆಲ್ಮೆಟ್, ಸೀಟ್ ಬೆಲ್ಟ್, ವೇಗ ನಿಯಂತ್ರಣ, ಮದ್ಯಪಾನ ಮತ್ತು ಮೊಬೈಲ್ ಬಳಕೆ ನಿಷೇಧದ ಕುರಿತ ಜಾಗೃತಿ ವಿಡಿಯೋಗಳನ್ನು ಕಡ್ಡಾಯವಾಗಿ ಪ್ರದರ್ಶಿಸಿ, ನಿಯಮಗಳನ್ನು ಅರಿತಿರುವ ಬಗ್ಗೆ ಸಹಿ ಪಡೆಯುವ ವ್ಯವಸ್ಥೆ ಜಾರಿಗೆ ತರುವಂತೆ ಸಾರಿಗೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ತುರ್ತು ಚಿಕಿತ್ಸಾ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ 2026ರ ಏಪ್ರಿಲ್ 15ರಿಂದ ಜಾರಿಯಾಗಿರುವ 'ಪಿಎಂ-ರಹತ್' ಯೋಜನೆಯಡಿ ಅಪಘಾತದ ಸಂತ್ರಸ್ತರಿಗೆ 7 ದಿನಗಳವರೆಗೆ ಗರಿಷ್ಠ ರೂ. 1.50 ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ನೀಡಲಾಗುತ್ತಿದ್ದು, ಇದಕ್ಕೆ ಪೂರಕವಾಗಿ 'ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ' ಯೋಜನೆಯಡಿ ಹೆಚ್ಚುವರಿ ರೂ. 1.00 ಲಕ್ಷ ಸೇರಿದಂತೆ ಒಟ್ಟು ರೂ. 2.50 ಲಕ್ಷದವರೆಗೆ ಚಿಕಿತ್ಸಾ ನೆರವು ಲಭ್ಯವಿದೆ. ರಾಜ್ಯದ 3,445 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಈ ಯೋಜನೆಯಡಿ ನೋಂದಣಿಯಾಗಿವೆ. ಜೊತೆಗೆ ತುರ್ತು ಸ್ಪಂದನೆಗಾಗಿ 108 ಮತ್ತು 102 ಸೇವೆಗಳನ್ನು 112 ಸಹಾಯವಾಣಿಯೊಂದಿಗೆ ಸಂಯೋಜಿಸಲಾಗಿದ್ದು, 100 ಹೊಸ ಬಿಎಲ್‌ಎಸ್ (BLS) ಆಂಬ್ಯುಲೆನ್ಸ್‌ಗಳ ಖರೀದಿ ಪೂರ್ಣಗೊಂಡಿದೆ. ಜಿಲ್ಲಾ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳನ್ನು (ICU) ಸಹ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಮುಖ್ಯ ಕಾರ್ಯದರ್ಶಿಗಳು ಮಾಹಿತಿ ನೀಡಿದರು.

 

Category
ಕರಾವಳಿ ತರಂಗಿಣಿ