image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರೈತರಿಗೆ ಹೆಚ್ಚಿನ ಸಾಲ ನೀಡಲು ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ನೆರವು ನೀಡಲಿ: ಡಾ. ಸಿ.ಟಿ. ರವಿ

ರೈತರಿಗೆ ಹೆಚ್ಚಿನ ಸಾಲ ನೀಡಲು ಸಹಕಾರಿ ಬ್ಯಾಂಕುಗಳಿಗೆ ಸರ್ಕಾರ ನೆರವು ನೀಡಲಿ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು: ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಿಗೆ ಆರ್ಥಿಕ ನೆರವು ನೀಡಬೇಕು ಹಾಗೂ ಬಡ್ಡಿ ಸಬ್ಸಿಡಿ ಮೊತ್ತವನ್ನು ವಿಳಂಬವಿಲ್ಲದೆ ಪ್ರತಿ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಮನವಿ ಮಾಡಿದರು.

ಸಖರಾಯಪಟ್ಟಣದ ವಿಲ್ಲಿಂಗ್ಡನ್ ಶಾಲೆಯ ಎದುರು ಸ್ಥಳಾಂತರಗೊಂಡಿರುವ ಡಿಸಿಸಿ ಬ್ಯಾಂಕಿನ ನೂತನ ಶಾಖೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬರಗಾಲದ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ ಹೆಚ್ಚುವರಿ ಬೆಳೆ ಸಾಲ ಮತ್ತು ಮಧ್ಯಮಾವಧಿ (ಎಂ.ಟಿ.) ಸಾಲಕ್ಕೆ ರೈತರಿಂದ ಬೇಡಿಕೆ ಹೆಚ್ಚಾಗಿದೆ. ಬ್ಯಾಂಕುಗಳ ಆರ್ಥಿಕ ಸಾಮರ್ಥ್ಯಕ್ಕೆ ಮಿತಿಯಿರುವುದರಿಂದ ಲಭ್ಯವಿರುವ ಠೇವಣಿ ಮೀರಿ ಸಾಲ ನೀಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಪುನರ್ಧನ ಅಥವಾ ಬ್ಯಾಂಕ್ ಗ್ಯಾರಂಟಿ ರೂಪದಲ್ಲಿ ಸಹಕಾರಿ ಬ್ಯಾಂಕುಗಳಿಗೆ ನೆರವು ಘೋಷಿಸಬೇಕು. ಬಡ್ಡಿ ಸಬ್ಸಿಡಿ ಹಣವನ್ನು ಒಂದೆರಡು ವರ್ಷ ಬಾಕಿ ಉಳಿಸಿಕೊಂಡರೆ ಬ್ಯಾಂಕುಗಳು ನಷ್ಟ ಅನುಭವಿಸುತ್ತವೆ. ಈ ಕುರಿತು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

70 ವರ್ಷಗಳ ಹಿಂದೆ ಕೇವಲ ₹1,400 ಬಂಡವಾಳದೊಂದಿಗೆ ಆರಂಭವಾದ ಬ್ಯಾಂಕ್ ಇಂದು ವಾರ್ಷಿಕ ₹3,000 ಕೋಟಿ ವಹಿವಾಟು ನಡೆಸುತ್ತಿದ್ದು, ₹1,700 ಕೋಟಿ ಠೇವಣಿ ಸಂಗ್ರಹಿಸಿದೆ. ಬ್ಯಾಂಕ್ ಮೂಲಕ ₹850 ಕೋಟಿಗೂ ಅಧಿಕ ಕೃಷಿ ಸಾಲ ವಿತರಿಸಲಾಗಿದೆ. ಬ್ಯಾಂಕ್ ವಿತರಿಸುವ ಪ್ರತಿ ₹100 ಸಾಲದಲ್ಲಿ ₹60 ಅನ್ನು ಕೃಷಿ ಸಾಲಕ್ಕೆ ಹಾಗೂ ₹40 ಅನ್ನು ಕೃಷಿಯೇತರ ಸಾಲಕ್ಕೆ ಮೀಸಲಿಡಲಾಗುತ್ತಿದೆ. ಸುಮಾರು 4,000 ರೈತರಿಗೆ ಶೂನ್ಯ ಹಾಗೂ ಶೇ. 3ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ವಿವರಿಸಿದರು.

ಸಖರಾಯಪಟ್ಟಣ ಶಾಖೆಯಿಂದ ಒಟ್ಟು ₹146.39 ಕೋಟಿ ಸಾಲ ವಿತರಿಸಲಾಗಿದ್ದು, ಇದರಲ್ಲಿ ₹26 ಕೋಟಿ ಶೂನ್ಯ ಬಡ್ಡಿದರದ ಕೃಷಿ ಸಾಲ ಹಾಗೂ ₹7 ಕೋಟಿ ಮಧ್ಯಮಾವಧಿ ಸಾಲ ಸೇರಿದೆ. ಪ್ರಸ್ತುತ ₹46.25 ಕೋಟಿ ಸಾಲ ಹೊರಬಾಕಿ ಇದ್ದು, ರೈತರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಿದರೆ ಶೂನ್ಯ ಬಡ್ಡಿದರದ ಸೌಲಭ್ಯ ಮುಂದುವರಿಯುವುದರ ಜೊತೆಗೆ ಮತ್ತಷ್ಟು ರೈತರಿಗೆ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು. ಶಾಖಾ ವ್ಯವಸ್ಥಾಪಕರು ಪಿಂಚಣಿ ಮತ್ತು ಪಿಗ್ಮಿ ಖಾತೆಗಳನ್ನು ಹೆಚ್ಚಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಕಟ್ಟಡಕ್ಕೆ ಜಾಗ ಒದಗಿಸಿದ ಈಶ್ವರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಸೂಕ್ತ ಜಾಗ ದೊರೆತರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಸಹಕಾರಿ ಕ್ಷೇತ್ರದ ದಿವಂಗತ ಧರ್ಮೇಗೌಡ ಅವರ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ವಿ. ಬಸವರಾಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಬಿ. ನಾಯಕ್, ಶಾಖಾ ವ್ಯವಸ್ಥಾಪಕ ಶಿವಣ್ಣ ಉಮಚಗಿ, ಮುಖಂಡರಾದ ಲೋಕೇಶ್, ಪಿಳ್ಳೇನಹಳ್ಳಿ ರಮೇಶ್, ಬಸವರಾಜ್, ಕೇತುಮಾರನಹಳ್ಳಿ ಉಮೇಶ್, ಪಾದಮನೆ ದಿನೇಶ್, ದಿಲೀಪ್ ಹುಲಿಕೆರೆ, ಆನಂದ್ ನಾಯಕ್ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ