ಚಿಕ್ಕಮಗಳೂರು: ಅಧಿಕಾರಕ್ಕಿಂತ ಜನರಿಗೆ ಶಾಶ್ವತವಾಗಿ ಉಪಯೋಗವಾಗುವ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಭದ್ರಾ ನದಿಯಿಂದ ಕಡೂರು, ತರೀಕೆರೆ ಮತ್ತು ಚಿಕ್ಕಮಗಳೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹1,281 ಕೋಟಿ ಮಂಜೂರು ಮಾಡಿಸಿದ್ದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಕೆರೆ ಆವರಣದಲ್ಲಿ ಆಯೋಜಿಸಿದ್ದ ಗಂಗಾ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2019-20ರ ಕೋವಿಡ್ ಸಂಕಷ್ಟದ ನಡುವೆಯೂ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮನವೊಲಿಸಿ ಈ ಯೋಜನೆಗೆ ಅನುಮೋದನೆ ಪಡೆಯಲಾಗಿತ್ತು. ಮೊದಲ ಎರಡು ಹಂತಗಳು ಪೂರ್ಣಗೊಂಡಿದ್ದು, ಮೂರನೇ ಹಂತದ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ವಡ್ಡರಹಳ್ಳಿ, ಕೆ.ಬಿ. ಹಾಳ್, ನರಸೀಪುರ ಸೇರಿದಂತೆ ಹಲವು ಗ್ರಾಮಗಳ ಕೆರೆಗಳಿಗೆ ನೀರು ತಲುಪಲಿದೆ. ಅಲ್ಲದೆ, ರಣಘಟ್ಟದಿಂದ ಬೆಳವಾಡಿ ಕೆರೆಗೆ ನೀರು ತುಂಬಿಸುವ ಯೋಜನೆ ಆರಂಭವಾಗಿದ್ದು, ಎತ್ತಿನಹೊಳೆ ಯೋಜನೆಯ ನೀರನ್ನು ಈ ಭಾಗದ ಕೆರೆಗಳಿಗೆ ಹರಿಸಲು ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದರು.
ದಾಸರಹಳ್ಳಿ ಮತ್ತು ಲಕ್ಯಾ ಮಾದರಸನ ಕೆರೆಗಳಿಗೆ ₹28 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ನಿರ್ವಹಣೆ ನೆಪದಲ್ಲಿ ದಾಸರಹಳ್ಳಿ ಕೆರೆಯ ಏರಿ ಒಡೆದು ನೀರು ಪೋಲಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಮಗಾರಿಗಳ ಜೊತೆಗೆ ನಿರ್ವಹಣೆಗೂ ಆದ್ಯತೆ ನೀಡಬೇಕು ಎಂದರು. ಭದ್ರಾ ನೀರು ತುಂಬಿಸುವ ಯೋಜನೆಯ ಗುತ್ತಿಗೆದಾರರಿಗೆ ಸರ್ಕಾರ ಬಾಕಿ ಬಿಲ್ ಪಾವತಿಸಿದರೆ ಏಳೆಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜ್ಯದ 200ಕ್ಕೂ ಹೆಚ್ಚು ಬರಪೀಡಿತ ತಾಲೂಕುಗಳಲ್ಲಿ ಜನ-ಜಾನುವಾರುಗಳಿಗೆ ನೀರು, ಮೇವು ಮತ್ತು ಉದ್ಯೋಗ ಕಲ್ಪಿಸಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ ಅವರು, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. 23 ಲಕ್ಷ ಜನರಿಗೆ ಹತ್ತು ತಿಂಗಳಿಂದ ಪಿಂಚಣಿ ಸಿಕ್ಕಿಲ್ಲ. ಟ್ರಾನ್ಸ್ಫಾರ್ಮರ್ ಅಳವಡಿಕೆ ವೆಚ್ಚ ₹25 ಸಾವಿರದಿಂದ ₹2.50 ಲಕ್ಷಕ್ಕೆ ಏರಿದ್ದು, ಪಹಣಿ, ಜನನ-ಮರಣ ಪ್ರಮಾಣಪತ್ರಗಳ ಶುಲ್ಕವೂ ಹೆಚ್ಚಾಗಿದೆ. ಬರಗಾಲದ ನಡುವೆ ಕುಮಾರಕೃಪಾ ಅತಿಥಿಗೃಹವನ್ನು ಸಿಎಂ ನಿವಾಸವಾಗಿ ಪರಿವರ್ತಿಸಲು ನೂರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವುದು ಸರ್ಕಾರದ ಆದ್ಯತೆಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
2018ರಿಂದ 2023ರವರೆಗೆ ಬೆಳವಾಡಿ ಪಂಚಾಯಿತಿ ವ್ಯಾಪ್ತಿಗೆ ₹40.22 ಕೋಟಿ ಅನುದಾನ ನೀಡಲಾಗಿದ್ದು, ವಡ್ಡರಹಳ್ಳಿ ಗ್ರಾಮದ ರಸ್ತೆ ಅಭಿವೃದ್ಧಿಗೆ ₹1.25 ಕೋಟಿ ಒದಗಿಸಲಾಗಿದೆ ಎಂದರು. ನಾವು ಮಂಜೂರು ಮಾಡಿದ್ದ ಅರಣ್ಯ ಭವನ, ಡಿಸಿ ಕಚೇರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಕಾಮಗಾರಿಗಳನ್ನು ಈಗಿನ ಶಾಸಕರು ಉದ್ಘಾಟಿಸಿ ಭಾಷಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಕೆರೆಗಳಿಗೆ ಕಸ ಹಾಕದೆ ಜಲಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರಳ್ಳಿ ಮಹೇಶ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಮಾಜಿ ತಾಪಂ ಅಧ್ಯಕ್ಷ ಬೆಳವಾಡಿ ಬಸವರಾಜು, ಮುಖಂಡರಾದ ಸಿಂದಿಗೆರೆ ಬಾಬು, ನಿಂಗೇಗೌಡ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.