image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮನೆಯಿಂದಲೇ ರಸಗೊಬ್ಬರ ಬುಕ್ಕಿಂಗ್: ಡಿ.1ರಿಂದ ಶಿವಮೊಗ್ಗದಲ್ಲಿ ಎಫ್‌ಎಫ್‌ಎಸ್ ಆ್ಯಪ್ ಜಾರಿ

ಮನೆಯಿಂದಲೇ ರಸಗೊಬ್ಬರ ಬುಕ್ಕಿಂಗ್: ಡಿ.1ರಿಂದ ಶಿವಮೊಗ್ಗದಲ್ಲಿ ಎಫ್‌ಎಫ್‌ಎಸ್ ಆ್ಯಪ್ ಜಾರಿ

ಶಿವಮೊಗ್ಗ : ರೈತರು ರಸಗೊಬ್ಬರಕ್ಕಾಗಿ ಅಂಗಡಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್' (FFS) ಮೊಬೈಲ್ ಆ್ಯಪ್ ವ್ಯವಸ್ಥೆಯು ಡಿಸೆಂಬರ್ 1, 2026ರಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಅನುಷ್ಠಾನಗೊಳ್ಳಲಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಡಾ. ಜಿ.ಸಿ. ಪೂರ್ಣಿಮಾ ತಿಳಿಸಿದ್ದಾರೆ.

ಕೃಷಿ ಇಲಾಖೆ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಹಿಂಗಾರು ಹಂಗಾಮಿನಲ್ಲಿ ರಾಜ್ಯದ ಆಯ್ದ 15 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದ್ದು, ಶಿವಮೊಗ್ಗವೂ ಸೇರಿದೆ ಎಂದರು. ರೈತರು ತಮ್ಮ ಆಂಡ್ರಾಯ್ಡ್ ಮೊಬೈಲ್‌ನಲ್ಲಿ FFS ಆ್ಯಪ್ ಡೌನ್‌ಲೋಡ್ ಮಾಡಿ, ಆಧಾರ್ ಸಂಖ್ಯೆ ಹಾಗೂ ಒಟಿಪಿ (OTP) ನಮೂದಿಸುವ ಮೂಲಕ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಮುಂಗಡವಾಗಿ ಗೊಬ್ಬರ ಕಾಯ್ದಿರಿಸಬಹುದು. ನಂತರ ಬರುವ ಕ್ಯೂಆರ್ (QR) ಕೋಡ್ ತೋರಿಸಿ ಹಾಗೂ ಡಿಜಿಟಲ್ ಪಾವತಿ ಮೂಲಕ ಆಯ್ದ ಅಂಗಡಿಯಲ್ಲಿ ಗೊಬ್ಬರ ಪಡೆಯಬಹುದು. ರೈತರ ಬದಲಿಗೆ ಬೇರೊಬ್ಬರು ಗೊಬ್ಬರ ಪಡೆಯುವುದಾದರೆ ರೈತರ ಒಟಿಪಿ, ಕ್ಯೂಆರ್ ಕೋಡ್ ಮತ್ತು ಪಡೆಯುವವರ ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಆ್ಯಪ್ ಬಳಕೆಗೆ ಸಾಮಾನ್ಯ ಸೇವಾ ಕೇಂದ್ರಗಳು (CSC), ಸಹಕಾರ ಸಂಘಗಳು (PACS) ಮತ್ತು ಕೃಷಿ ಸಖಿಯರ ನೆರವು ಪಡೆಯಬಹುದು. ಭೂ ದಾಖಲೆ ಇಲ್ಲದ ಕೃಷಿಕರಿಗೂ ವಿನಾಯಿತಿ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಆಧಾರ್ ಆಧಾರಿತ ವ್ಯವಸ್ಥೆಯಿಂದ ನಿಗದಿತ ಮಿತಿಗಿಂತ ಹೆಚ್ಚಿನ ಖರೀದಿ ಮತ್ತು ಅಕ್ರಮ ಮಾರಾಟಕ್ಕೆ ಕಡಿವಾಣ ಬೀಳಲಿದ್ದು, ಪಾರದರ್ಶಕತೆ ಹೆಚ್ಚಲಿದೆ. ರೈತರು ಹಾಗೂ ಮಾರಾಟಗಾರರು ಈ ಯೋಜನೆಯ ಯಶಸ್ಸಿಗೆ ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು. ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶಶಿಧರ್, ಗೋವಿಂದ ನಾಯಕ್, ಮಾರಾಟಗಾರ ಸಂಘದ ಕಾರ್ಯದರ್ಶಿ ಸಿ. ಲೋಕೇಶ್ವರ, ಉಪಾಧ್ಯಕ್ಷ ಈಶ್ವರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

 

Category
ಕರಾವಳಿ ತರಂಗಿಣಿ