image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಅವಧಿ ವಿಸ್ತರಣೆ, ದಂಡ ಶುಲ್ಕ ಇಳಿಕೆ

ಕುವೆಂಪು ವಿವಿ ಪರೀಕ್ಷಾ ಶುಲ್ಕ ಪಾವತಿ ಅವಧಿ ವಿಸ್ತರಣೆ, ದಂಡ ಶುಲ್ಕ ಇಳಿಕೆ

ಶಿವಮೊಗ್ಗ: UUCMS ತಾಂತ್ರಿಕ ದೋಷದಿಂದಾಗಿ ಪರೀಕ್ಷಾ ಶುಲ್ಕ ಪಾವತಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ನೂರಾರು ವಿದ್ಯಾರ್ಥಿಗಳ ಪರವಾಗಿ ಶಿವಮೊಗ್ಗ ಜಿಲ್ಲಾ NSUI ಮಧ್ಯಾಹ್ನದಿಂದ ತಡರಾತ್ರಿವರೆಗೆ ನಡೆದ ನಿರಂತರ ಪ್ರತಿಭಟನೆಗೆ ಮಣಿದ ಕುವೆಂಪು ವಿಶ್ವವಿದ್ಯಾಲಯವು ದಂಡ ಶುಲ್ಕವನ್ನು ₹1,000 ದಿಂದ ₹500ಕ್ಕೆ ಇಳಿಸಿದ್ದು, ಶುಲ್ಕ ಪಾವತಿಸುವ ಕೊನೆಯ ದಿನಾಂಕವನ್ನು ನವೆಂಬರ್ 21, 2026ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ತಾಂತ್ರಿಕ ಸಮಸ್ಯೆಯಿಂದಾಗಿ ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿಧಿಸಲಾಗಿದ್ದ ಹೆಚ್ಚುವರಿ ದಂಡ ಶುಲ್ಕವನ್ನು ಖಂಡಿಸಿ NSUI ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಮೌಲ್ಯಮಾಪನ ಕುಲಸಚಿವರನ್ನು ಭೇಟಿ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಹೋರಾಟದ ತೀವ್ರತೆಯನ್ನು ಮನಗಂಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ವಿದ್ಯಾರ್ಥಿಗಳ ಒಗ್ಗಟ್ಟು ಮತ್ತು ನಿರಂತರ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಸಂಘಟನೆಯ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶ್ವವಿದ್ಯಾಲಯವು ನೀಡಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಸಂಕಷ್ಟದಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ನವೆಂಬರ್ 21ರೊಳಗೆ ₹500 ದಂಡ ಶುಲ್ಕದೊಂದಿಗೆ ತಮ್ಮ ಪರೀಕ್ಷಾ ಶುಲ್ಕವನ್ನು ಪಾವತಿಸುವಂತೆ ಮನವಿ ಮಾಡಲಾಗಿದೆ.

ಈ ಹೋರಾಟದಲ್ಲಿ NSUI ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಾಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿಕುಮಾರ್, ನಗರ ಉಪಾಧ್ಯಕ್ಷರಾದ ಆದಿತ್ಯ ಸುಭಾನ್, ಸುಲ್ತಾನ್, ಕುಮಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ