ಶಿವಮೊಗ್ಗ: ಯುವಶಕ್ತಿಯ ಭವಿಷ್ಯವನ್ನು ಭದ್ರಪಡಿಸಿದರೆ ಮುಂದಿನ ದಿನಗಳಲ್ಲಿ ಭಾರತ ಜಾಗತಿಕವಾಗಿ ಹೆಚ್ಚು ಮನ್ನಣೆ ಗಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.
ನಗರದ ಗಂಗೋತ್ರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಂಸ್ಕೃತಿಕವಾಗಿ ಮುನ್ನಡೆಯುವ ದೇಶದಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಿರುತ್ತವೆ. ಅಂತಹ ಸದೃಢ ಪರಂಪರೆ ಹೊಂದಿರುವ ನಾವು ಧನ್ಯರು. ಸಾಂಸ್ಕೃತಿಕವಾಗಿ ಹೆಸರುವಾಸಿಯಾದ ಶಿವಮೊಗ್ಗ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು 800 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಪ್ರಶಸ್ತಿಗಿಂತ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಿ, ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ವಿಧಾನಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಇಂದಿನ ಯುವಕರಲ್ಲಿ ಸ್ಪರ್ಧಾ ಮನೋಭಾವ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ಮತ್ತು ಮನೋವಿಕಾಸಕ್ಕೆ ಇಂತಹ ಸ್ಪರ್ಧೆಗಳು ಅತ್ಯಗತ್ಯವಾಗಿದ್ದು, ಇವು ಮನುಷ್ಯನನ್ನು ಇನ್ನಷ್ಟು ಚುರುಕಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ ಎಂದು ತಿಳಿಸಿದರು.
ಗಂಗೋತ್ರಿ ಕಾಲೇಜಿನ ಅಧ್ಯಕ್ಷ ಸುಂದರೇಶ್ ಮಾತನಾಡಿ, ಪೋಷಕರು ಮಕ್ಕಳ ಬೆಳವಣಿಗೆಯನ್ನು ಕೇವಲ ಅಂಕಗಳ ಮೂಲಕ ಅಳೆಯದೆ, ಅವರಲ್ಲಿರುವ ಆಂತರಿಕ ಪ್ರತಿಭೆಯನ್ನು ಹೊರತರಲು ಪ್ರೋತ್ಸಾಹಿಸಬೇಕು. ಇಂತಹ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸಮಗ್ರ ವಿಕಾಸ ಸಾಧ್ಯವಾಗುತ್ತದೆ ಎಂದರು.
ಜಿಲ್ಲೆಯ 60 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕುಟ್ರಿ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಶಶಿಧರ್, ಗಂಗೋತ್ರಿ ಕಾಲೇಜಿನ ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಜಗದೀಶ, ಜಂಟಿ ಕಾರ್ಯದರ್ಶಿ ರಾಕೇಶಗೌಡ, ನಿರ್ದೇಶಕರಾದ ಡಿ.ಎಂ. ಪರಮೇಶ್ವರಪ್ಪ, ಸುಬ್ರಮಣ್ಯಸ್ವಾಮಿ, ಚಂದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.