image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಟಿಎಪಿಸಿಎಂಎಸ್ ರೈತಸ್ನೇಹಿ ಸಂಸ್ಥೆಯಾಗಿ ಬೆಳೆಯಲಿ: ಡಾ. ಸಿ.ಟಿ. ರವಿ

ಟಿಎಪಿಸಿಎಂಎಸ್ ರೈತಸ್ನೇಹಿ ಸಂಸ್ಥೆಯಾಗಿ ಬೆಳೆಯಲಿ: ಡಾ. ಸಿ.ಟಿ. ರವಿ

ಮೂಡಿಗೆರೆ: ಸಹಕಾರಿ ತತ್ವವು ಕೆಲವರ ಅಭಿವೃದ್ಧಿಗಷ್ಟೇ ಸೀಮಿತವಾಗದೆ ಸಮಾಜದ ಸರ್ವರ ಪ್ರಗತಿಗೆ ನೆರವಾಗುವ ಶಕ್ತಿಯಾಗಿದೆ. ಮೂಡಿಗೆರೆ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) ರೈತಸ್ನೇಹಿ ಸಂಸ್ಥೆಯಾಗಿ ಮತ್ತಷ್ಟು ಬೆಳೆಯಲಿ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಆಶಿಸಿದರು.

ಮೂಡಿಗೆರೆ ಟಿಎಪಿಸಿಎಂಎಸ್ ವತಿಯಿಂದ ₹2.65 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಆಡಳಿತ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲೇ ಮಾಕೋನಹಳ್ಳಿ ಸಿದ್ದೇಗೌಡರು ಹಾಗೂ ಕಡವಳ್ಳಿ ಹುಚ್ಚೇಗೌಡರು ಈ ಸಂಸ್ಥೆಗೆ ಅಡಿಪಾಯ ಹಾಕಿದ ದೂರದೃಷ್ಟಿಯನ್ನು ಸ್ಮರಿಸಿದ ಅವರು, ಸಂಸ್ಥೆಯ 113 ವರ್ಷಗಳ ಇತಿಹಾಸ ಮತ್ತು ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ‘ಸಹಕಾರದಿಂದ ಸಮೃದ್ಧಿ’ ಘೋಷಣೆಯೊಂದಿಗೆ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪಿಸಿರುವುದರಿಂದ ಸಹಕಾರಿ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಆದ್ಯತೆ ದೊರೆತಿದೆ. ಸಂಸ್ಥೆಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಎರಡು ಚಕ್ರಗಳಂತೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಅತ್ಯಗತ್ಯವಾಗಿದ್ದು, ನೂತನ ಕಟ್ಟಡವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಬೇಕು ಎಂದು ಸಲಹೆ ನೀಡಿದರು.

ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಸಹಕಾರಿ ಬ್ಯಾಂಕಿನ ಇತಿಮಿತಿಗಳ ನಡುವೆಯೂ ಮಧ್ಯಮಾವಧಿ ಸಾಲ ಸೌಲಭ್ಯ ಒದಗಿಸುವುದರ ಜೊತೆಗೆ ಕೆಸಿಸಿ (KCC) ಸಾಲದ ಪ್ರಮಾಣ ಹೆಚ್ಚಿಸುವ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಡಾ. ರವಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಕಲ್ಲೇಶ್, ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಿ.ಸಿ. ಲೋಕಪ್ಪ ಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ., ಗಣೇಶ್ ಸೇರಿದಂತೆ ಸಂಘದ ಮಾಜಿ ಅಧ್ಯಕ್ಷರು, ನಿರ್ದೇಶಕರು, ಸಿಬ್ಬಂದಿ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ