image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರ್‌ಟಿಇ ಪ್ರವೇಶಾತಿಗೆ ಆದಾಯ ಮಿತಿ ₹8 ಲಕ್ಷಕ್ಕೆ ಏರಿಕೆ

ಆರ್‌ಟಿಇ ಪ್ರವೇಶಾತಿಗೆ ಆದಾಯ ಮಿತಿ ₹8 ಲಕ್ಷಕ್ಕೆ ಏರಿಕೆ

ಬೆಂಗಳೂರು: ರಾಜ್ಯದ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಸಿಹಿಸುದ್ದಿ ನೀಡಿದ್ದು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿಯಲ್ಲಿ ಪ್ರವೇಶ ಪಡೆಯಲು ನಿಗದಿಪಡಿಸಿದ್ದ ಪೋಷಕರ ವಾರ್ಷಿಕ ಆದಾಯ ಮಿತಿಯನ್ನು ₹3.5 ಲಕ್ಷದಿಂದ ₹8 ಲಕ್ಷಕ್ಕೆ ಹೆಚ್ಚಿಸಿ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ನವೆಂಬರ್ 16ರಂದು ಹೊರಡಿಸಲಾದ ಈ ಆದೇಶದನ್ವಯ, ಕಾಯ್ದೆಯ ಸೆಕ್ಷನ್ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ (ಅಲ್ಪಸಂಖ್ಯಾತವಲ್ಲದ) ಶಾಲೆಗಳಲ್ಲಿ ಶೇ. 25ರಷ್ಟು ಮೀಸಲಾತಿಯಡಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಉಚಿತ ಶಿಕ್ಷಣ ಪಡೆಯಲು ಇನ್ನು ಮುಂದೆ ₹8 ಲಕ್ಷದವರೆಗಿನ ವಾರ್ಷಿಕ ಆದಾಯ ಮಿತಿ ಅನ್ವಯವಾಗಲಿದೆ. ಹಿಂದುಳಿದ ಗುಂಪುಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ ವಾಸಿಸುವ ಇತರ ಎಲ್ಲಾ ಜಾತಿ ಹಾಗೂ ಸಮುದಾಯಗಳ ₹8 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ದುರ್ಬಲ ವರ್ಗದ ಮಕ್ಕಳು ಇದರ ಪ್ರಯೋಜನ ಪಡೆಯಲಿದ್ದಾರೆ.

2013ರ ಮಾರ್ಚ್ 18ರಂದು ಹೊರಡಿಸಿದ್ದ ಆದೇಶದಲ್ಲಿ ಆರ್‌ಟಿಇ ದಾಖಲಾತಿಗೆ ಗರಿಷ್ಠ ಆದಾಯ ಮಿತಿಯನ್ನು ₹3.50 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಆದರೆ, ಬದಲಾದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಆದಾಯ ಮಿತಿಯನ್ನು ಮರುಪರಿಶೀಲಿಸಿ ಹೆಚ್ಚಿಸುವಂತೆ ಕರ್ನಾಟಕ ಹೈಕೋರ್ಟ್ 2023ರ ಜನವರಿ 27ರಂದು ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಸರ್ಕಾರಕ್ಕೆ ಸೂಚನೆ ನೀಡಿತ್ತು. ನ್ಯಾಯಾಲಯದ ಈ ತೀರ್ಪಿನ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿ ಪಡೆದು ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ನೂತನ ಆದೇಶಕ್ಕೆ ವ್ಯತಿರಿಕ್ತವಾಗಿಲ್ಲದಿದ್ದಲ್ಲಿ, 2013, 2016 ಹಾಗೂ 2017ರಲ್ಲಿ ಹೊರಡಿಸಲಾಗಿದ್ದ ಇತರ ಎಲ್ಲಾ ಮಾರ್ಗಸೂಚಿಗಳು ಯಥಾವತ್ತಾಗಿ ಮುಂದುವರೆಯಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿ (ಯೋಜನೆ) ಶುಭಮಂಗಳ ಆರ್.ವಿ. ಅವರು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ