image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮ್ಮೇಳನಕ್ಕೆ ಚಾಲನೆ

ಶಿವಮೊಗ್ಗದಲ್ಲಿ ಅಂತಾರಾಷ್ಟ್ರೀಯ ವಿಪತ್ತು ನಿರ್ವಹಣೆ ಸಮ್ಮೇಳನಕ್ಕೆ ಚಾಲನೆ

ಶಿವಮೊಗ್ಗ: ಯಾವುದೇ ರೀತಿಯ ವಿಪತ್ತನ್ನು ಎದುರಿಸಲು ಮುನ್ನೆಚ್ಚರಿಕೆಯೇ ಪ್ರಮುಖ ಅಸ್ತ್ರವಾಗಿದ್ದು, ಜಾಗತಿಕ ಅನುಭವ ಮತ್ತು ಸ್ಥಳೀಯ ಸನ್ನದ್ಧತೆ ಎರಡೂ ಅತ್ಯಂತ ಅಗತ್ಯ ಎಂದು ಜಪಾನ್‌ನ ಅಸೋಸಿಯೇಷನ್ ಆಫ್ ಮೆಡಿಕಲ್ ಡಾಕ್ಟರ್ಸ್ ಆಫ್ ಏಷ್ಯಾ (ಎಎಂಡಿಎ) ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ. ಶಿಗೆರು ಸುಗನಾಮಿ ಹೇಳಿದರು.

ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಎಎಂಡಿಎ ಸಹಯೋಗದಲ್ಲಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ ಆಯೋಜಿಸಿರುವ ಎರಡು ದಿನಗಳ 'ವಿಪತ್ತು ನಿರ್ವಹಣೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ-2026'ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ವಿಪತ್ತು ಸಂಭವಿಸಿದ ನಂತರದ ಪರಿಹಾರ ಕಾರ್ಯಕ್ಕಿಂತ ಮೊದಲೇ ವೈದ್ಯಕೀಯ ಸಿಬ್ಬಂದಿ, ಸ್ವಯಂಸೇವಕರು ಮತ್ತು ಸ್ಥಳೀಯ ಆಡಳಿತಕ್ಕೆ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಅವರು ಕರೆ ನೀಡಿದರು. ವಿಪತ್ತು ನಿರ್ವಹಣೆ ಕೇವಲ ಪರಿಹಾರಕ್ಕೆ ಸೀಮಿತವಾಗದೆ, ಪೂರ್ವ ಸಿದ್ಧತೆ, ಸಂಪನ್ಮೂಲ ಸಂಗ್ರಹ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಬೇಕು ಎಂದರು. ಜಾಗತಿಕ ವೇದಿಕೆಗಳೊಂದಿಗೆ ಸಂಪರ್ಕ, ಸ್ಥಳೀಯ ಆಡಳಿತ ಹಾಗೂ ಸಮುದಾಯದ ನಾಯಕರೊಂದಿಗೆ ಉತ್ತಮ ಸಮನ್ವಯದಿಂದ ವೈದ್ಯಕೀಯ ನೆರವು ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳಬಹುದು ಎಂದು ತಿಳಿಸಿದರು. ಎಎಂಡಿಎ ಹಲವು ವರ್ಷಗಳಿಂದ ವಿವಿಧ ದೇಶಗಳಲ್ಲಿ ವೈದ್ಯಕೀಯ ನೆರವು ಮತ್ತು ಮಾನವೀಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅನುಭವ ಹಂಚಿಕೆಯ ಮೂಲಕ ದೇಶಗಳ ನಡುವೆ ಸಹಕಾರ ಬಲಪಡಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ವಿನಾಯಕ ಮಾತನಾಡಿ, ವಿಪತ್ತು ಸಂಭವಿಸುವ ಮೊದಲೇ ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲಗಳನ್ನು ಕಲಿಸಬೇಕು ಎಂದರು. ತುರ್ತು ಸಂದರ್ಭಗಳಲ್ಲಿ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಸಾಮರ್ಥ್ಯ, ಸಂಪನ್ಮೂಲ ನಿರ್ವಹಣೆ ಮತ್ತು ತಂಡವಾಗಿ ಕಾರ್ಯನಿರ್ವಹಿಸುವ ಕೌಶಲ ಬೆಳೆಸುವುದು ಅಗತ್ಯವಾಗಿದ್ದು, ಎಎಂಡಿಎ ಅನುಭವಗಳು ಸಮ್ಮೇಳನಕ್ಕೆ ಹೆಚ್ಚಿನ ಮೌಲ್ಯ ನೀಡಲಿವೆ ಎಂದು ಅಭಿಪ್ರಾಯಪಟ್ಟರು.

ಸುಬ್ಬಯ್ಯ ಸಂಶೋಧನಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ. ಲತಾ ನಾಗೇಂದ್ರ ಮಾತನಾಡಿ, ಸುಬ್ಬಯ್ಯ ಸಂಶೋಧನಾ ಸಂಸ್ಥೆ ಮತ್ತು ಎಎಂಡಿಎ ನಡುವೆ 2019ರಲ್ಲಿ ಒಡಂಬಡಿಕೆಯಾಗಿದ್ದು, ಅಂದಿನಿಂದ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದರು. ಜಾಗತಿಕ ಪರಿಣತಿ ಮತ್ತು ಅನುಭವಗಳನ್ನು ಸ್ಥಳೀಯ ಅಗತ್ಯಗಳೊಂದಿಗೆ ಬೆಸೆದು ಸಮಾಜಕ್ಕೆ ಉಪಯುಕ್ತ ಸಂಶೋಧನೆ ಮತ್ತು ಸೇವೆ ಒದಗಿಸುವುದು ಸಂಸ್ಥೆಯ ದೂರದೃಷ್ಟಿಯಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಜಿ ಹಿರಿಯ ಸಲಹೆಗಾರ್ತಿ ಡಾ. ಪೂಜಾ ಸಕ್ಸೇನಾ ಮಾತನಾಡಿ, ವಿಪತ್ತು ನಿರ್ವಹಣೆಯಲ್ಲಿ ಆಸ್ಪತ್ರೆಗಳ ಸುರಕ್ಷತೆ ಮತ್ತು ಸನ್ನದ್ಧತೆ ನಿರ್ಣಾಯಕವಾಗಿದೆ ಎಂದರು. ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳು ಏಕಕಾಲದಲ್ಲಿ ಆಸ್ಪತ್ರೆಗೆ ಬಂದಾಗ ಒತ್ತಡ ನಿಭಾಯಿಸಲು ತುರ್ತು ಚಿಕಿತ್ಸಾ ವ್ಯವಸ್ಥೆ, ಉಪಕರಣಗಳು, ಔಷಧಗಳ ಲಭ್ಯತೆ ಮತ್ತು ಸಿಬ್ಬಂದಿ ನಿಯೋಜನೆ ಕುರಿತು ಮುಂಚಿತವಾಗಿಯೇ ಸಮಗ್ರ ಯೋಜನೆ ರೂಪಿಸಬೇಕು ಹಾಗೂ ನಿರಂತರ ತರಬೇತಿ ನೀಡಬೇಕು ಎಂದು ಹೇಳಿದರು.

ಎರಡು ದಿನಗಳ ಸಮ್ಮೇಳನದಲ್ಲಿ ವಿಪತ್ತು ಅಪಾಯ ಕ್ಷೀಣಗೊಳಿಸುವಿಕೆ, ಪೂರ್ವ ಸನ್ನದ್ಧತೆ, ತುರ್ತು ಪ್ರತಿಸ್ಪಂದನೆ, ಪುನರ್ವಸತಿ, ಸಮುದಾಯದ ಸಹಕಾರ, ಹಾವು ಕಡಿತದ ತುರ್ತು ಚಿಕಿತ್ಸೆ ಹಾಗೂ ವಿಪತ್ತಿನ ಸಂದರ್ಭದಲ್ಲಿ ಮಾನಸಿಕ ಆರೋಗ್ಯ ಮತ್ತು ಮನೋಸಾಮಾಜಿಕ ಬೆಂಬಲ ಕುರಿತು ತಜ್ಞರು ಚರ್ಚಿಸಲಿದ್ದಾರೆ. ಗುರುವಾರ ತಜ್ಞರ ಗೋಷ್ಠಿಗಳು, ನೀತಿ ಹ್ಯಾಕಥಾನ್, ಸಂಶೋಧನಾ ಪ್ರಬಂಧ ಮಂಡನೆ, ಪೋಸ್ಟರ್ ಪ್ರಸ್ತುತಿ, ಸಂವಾದ ಹಾಗೂ ಆರು ವಿಭಾಗಗಳಲ್ಲಿ ಪ್ರಾಯೋಗಿಕ ಕಾರ್ಯಾಗಾರಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಜಪಾನ್ ಎಎಂಡಿಎಯ ಡಾ. ಟೊಮೊಕೊ, ಎಎಂಡಿಎ ಇಂಡಿಯಾ ಅಧ್ಯಕ್ಷ ಡಾ. ಎಂ.ಎಸ್. ಕಾಮತ್, ಡಾ. ರಾಮಚಂದ್ರ ಕಾಮತ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಡಾ. ಸೌರಭ್ ದಲಾಲ್, ಡಾ. ಆರ್.ಪಿ. ಪೈ, ಡಾ. ಕೆ.ಬಿ. ಸಂತೋಷ್, ಡಾ. ಸಂಜೀವ್ ಮಣಿಕಪ್ಪ ಸೇರಿದಂತೆ ಗಣ್ಯರು, ವೈದ್ಯರು, ಸಂಶೋಧಕರು, ಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಪೋಷಕರಾಗಿ ಡಾ. ಎಸ್. ನಾಗೇಂದ್ರ ಮತ್ತು ಡಾ. ಲತಾ ಆರ್. ತೆಲಂಗ್, ಸಂಘಟನಾ ಅಧ್ಯಕ್ಷರಾಗಿ ಡಾ. ನಿರಂಜನ್ ಕಾಂಬ್ಳೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಡಾ. ವಿದ್ಯಾ ನಿರಂಜನ್ ಕಾರ್ಯನಿರ್ವಹಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ