image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷದ ಸಿದ್ಧಾಂತ ಮುಖ್ಯ: ಡಾ. ಸಿ.ಟಿ. ರವಿ

ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷದ ಸಿದ್ಧಾಂತ ಮುಖ್ಯ: ಡಾ. ಸಿ.ಟಿ. ರವಿ

ಚಿಕ್ಕಮಗಳೂರು: ಜನಪರ ಕಾರ್ಯ ಮತ್ತು ಹೋರಾಟಗಳ ಮೂಲಕ ಮಾತ್ರ ನಿಜವಾದ ಜನನಾಯಕನಾಗಿ ಬೆಳೆಯಲು ಸಾಧ್ಯವಿದ್ದು, ಸಂಘಟನೆಯಲ್ಲಿ ವೈಯಕ್ತಿಕ ಪ್ರತಿಷ್ಠೆ ಹಾಗೂ ಅಹಂಕಾರಕ್ಕಿಂತ ಪಕ್ಷದ ಸಿದ್ಧಾಂತವೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದ್ದಾರೆ.

ಪಕ್ಷದ ಜಿಲ್ಲಾ ಕಾರ್ಯಾಲಯ ಪಾಂಚಜನ್ಯದಲ್ಲಿ ನಡೆದ ಜಾಗರ ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ನಾಯಕತ್ವದ ಕೊರತೆ ಕಂಡುಬಂದರೆ ಕಾರ್ಯಕರ್ತರೇ ಆ ಜವಾಬ್ದಾರಿ ವಹಿಸಿಕೊಂಡು ಜನರ ನಡುವೆ ಕೆಲಸ ಮಾಡಬೇಕು. ವ್ಯಕ್ತಿಗತ ಹಿತಾಸಕ್ತಿ ಹೆಚ್ಚಾದಾಗ ಗುಂಪುಗಾರಿಕೆ ಉಂಟಾಗುತ್ತದೆ. ಎಲ್ಲರೂ ಪಕ್ಷದ ಸಿದ್ಧಾಂತಕ್ಕಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳಬೇಕು ಮತ್ತು ಬೂತ್ ಸಮಿತಿಗಳಲ್ಲಿ ನಿಷ್ಕ್ರಿಯರನ್ನು ಬದಲಾಯಿಸಿ ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮೀಸಲಾತಿ ಮತ್ತು ಸ್ಪರ್ಧೆಯ ಸಾಧ್ಯತೆಗಳ ಬಗ್ಗೆ ಸ್ಪಷ್ಟತೆ ಬಂದ ನಂತರ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಟೀಕಿಸಿದ ಅವರು, ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಎರಡೆರಡು ಕಡೆ ಹೆಸರಿರುವವರನ್ನು ಪಟ್ಟಿಯಿಂದ ತೆಗೆದುಹಾಕುವುದು ಇದರ ಉದ್ದೇಶವಾಗಿದೆ ಎಂದರು. ರಾಜ್ಯದಲ್ಲಿ 99.32 ಲಕ್ಷ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 85 ಸಾವಿರ ಮತದಾರರ ಹೆಸರು ಕೈಬಿಟ್ಟಿರುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಅಧೀನದ ಅಧಿಕಾರಿಗಳ ಪಾತ್ರವಿದೆ. ಅರ್ಹ ಮತದಾರರ ಹೆಸರು ಬಿಟ್ಟುಹೋಗಿದ್ದರೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಲು ಅವಕಾಶವಿದ್ದರೂ, ಅದನ್ನು ಬಿಟ್ಟು ಪ್ರಧಾನಿ ರಾಜೀನಾಮೆ ಕೇಳುವುದು ಆಧಾರರಹಿತ ಎಂದು ಹೇಳಿದರು.

2018ರಿಂದ 2023ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾಗರ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿತ್ತು. ಹಿಂದಿನ ಸರ್ಕಾರದ ಅನುದಾನ, ಮನೆಗಳ ಮಂಜೂರಾತಿ ಹಾಗೂ ಎಸ್‌ಸಿ-ಎಸ್‌ಟಿ ಅನುದಾನವನ್ನು ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನದೊಂದಿಗೆ ಹೋಲಿಕೆ ಮಾಡಿ ಜನರ ಮುಂದೆ ಚರ್ಚಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಸಭೆಯಲ್ಲಿ ರಾಜ್ಯ ಎಸ್‌ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಜಾಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹೊಸಪೇಟೆ ದೇವರಾಜು, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ರಾಜೀವ್, ಪ್ರಕಾಶ್ ಬಿಳೇಕಲ್ಲಹಳ್ಳಿ, ಸುರೇಶ್ ದೇವರಹಳ್ಳಿ, ತೋಟದಹಳ್ಳಿ ಶಿವಣ್ಣ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ