ಚಿಕ್ಕಮಗಳೂರು: ಸನಾತನ ಸಂಸ್ಕೃತಿಯು ಜಾತಿಗಿಂತ ನೀತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಸಮಾಜದಲ್ಲಿ ಜಾತಿ ಆಧಾರಿತ ಭೇದಭಾವಕ್ಕಿಂತ ಒಳ್ಳೆಯತನ, ನಿಷ್ಠೆ ಮತ್ತು ನೈತಿಕ ಮೌಲ್ಯಗಳಿಗೆ ಆದ್ಯತೆ ದೊರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ಅಭಿಪ್ರಾಯಪಟ್ಟರು.
ನಗರದ ಉಂಡೇದಾಸರಹಳ್ಳಿಯಲ್ಲಿ ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಿರುವ ಸಮುದಾಯ ಭವನದ ಲೋಕಾರ್ಪಣೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪರಮಪೂಜ್ಯ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕುಂಬಾರ ಗುಂಡಯ್ಯ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಅವರು ಮಾತನಾಡಿದರು. ಆರಂಭದಲ್ಲಿ ರಸ್ತೆಯೂ ಸರಿಯಿಲ್ಲದ, ಮಳೆಗಾಲದಲ್ಲಿ ಕೆಸರು ತುಂಬಿಕೊಳ್ಳುತ್ತಿದ್ದ ಜಾಗವನ್ನು ಉಳಿಸಿಕೊಂಡು, ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರ ಪರಿಶ್ರಮದಿಂದ ಸಮುದಾಯ ಭವನ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ತಮ್ಮ ಅವಧಿಯಲ್ಲಿ ಭವನ ನಿರ್ಮಾಣಕ್ಕೆ ₹53 ಲಕ್ಷಕ್ಕೂ ಅಧಿಕ ಅನುದಾನ ಒದಗಿಸಲು ಕ್ರಮ ಕೈಗೊಂಡಿದ್ದು, ಅದರಲ್ಲಿ ₹28 ಲಕ್ಷ ಬಿಡುಗಡೆಯಾಗಿ ಬಳಕೆಯಾಗಿದೆ. ಉಳಿದ ₹25 ಲಕ್ಷ ಅನುದಾನವನ್ನು ರಾಜಕೀಯ ಕಾರಣಗಳಿಂದ ಹಿಂಪಡೆಯಲಾಗಿದ್ದು, ಅದು ಪೂರ್ಣ ಪ್ರಮಾಣದಲ್ಲಿ ಸಿಕ್ಕಿದ್ದರೆ ನಿರ್ಮಾಣಕ್ಕೆ ಮತ್ತಷ್ಟು ಅನುಕೂಲವಾಗುತ್ತಿತ್ತು ಎಂದು ತಿಳಿಸಿದರು.
ರಾಮನನ್ನು ಮರ್ಯಾದಾ ಪುರುಷೋತ್ತಮನಾಗಿ ಪೂಜಿಸುವ ಹಾಗೂ ಹನುಮಂತನ ನಿಷ್ಠೆಯನ್ನು ಆದರ್ಶವಾಗಿ ಸ್ವೀಕರಿಸಿರುವ ನಮ್ಮ ಸಮಾಜದಲ್ಲಿ ಜಾತಿ ಭೇದಗಳು ಬಲಗೊಂಡಿರುವುದು ವಿಷಾದನೀಯ. ಹಿಂದೆ ವೃತ್ತಿಯ ಗುರುತಾಗಿದ್ದ ಕುಂಬಾರ, ನೇಕಾರ, ಒಕ್ಕಲಿಗ ಎಂಬ ಹೆಸರುಗಳು ಕ್ರಮೇಣ ಜಾತಿ ಗುರುತಾಗಿ ಬದಲಾಗಿವೆ. ದೇಹದ ಅಂಗಾಂಗಗಳು ವಿಭಿನ್ನ ಕಾರ್ಯ ನಿರ್ವಹಿಸಿದರೂ ಪರಸ್ಪರ ಸಂಬಂಧ ಹೊಂದಿರುವಂತೆ, ಸಮಾಜದ ವಿವಿಧ ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು ಎಂದರು.
ವೃತ್ತಿಯ ವಿಚಾರ ಬಂದಾಗ ಕುಂಬಾರ ಸಮಾಜದ ಹೆಮ್ಮೆಯನ್ನು ಉಳಿಸಿಕೊಳ್ಳಬೇಕು; ಆದರೆ ಧರ್ಮ, ನೀತಿ, ದೇಶ ಮತ್ತು ಕನ್ನಡದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಿ ಸಮಾಜವನ್ನು ಜೋಡಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಪರಂಪರೆ ಮತ್ತು ಕಾಯಕನಿಷ್ಠೆಗೆ ಹೆಸರಾದ ಕುಂಬಾರ ಸಮಾಜದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಈ ಭವನ ಪೂರಕವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಪರಿಸರ ಮೌಲ್ಯಮಾಪನ ಪ್ರಾಧಿಕಾರದ ರಾಜ್ಯ ಘಟಕದ ಅಧ್ಯಕ್ಷ ಎ.ಎನ್. ಮಹೇಶ್, ನಗರಸಭೆ ಅಧ್ಯಕ್ಷೆ ರೂಪಾ ಕುಮಾರ್, ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಂ. ಗಂಗಾಧರ್, ಗೌರವಾಧ್ಯಕ್ಷ ಕೆ.ಆರ್. ಪರಮೇಶ್, ಪ್ರಧಾನ ಕಾರ್ಯದರ್ಶಿ ವರದಪ್ಪ ಶೆಟ್ಟಿ, ಖಜಾಂಚಿ ನಟರಾಜ್, ಬಿಜೆಪಿ ಹಿರಿಯ ಮುಖಂಡ ಕೋಟೆ ರಂಗನಾಥ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.