ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕರಿಂದ ಮನಬಂದಂತೆ ದರ ವಸೂಲಿ ಮಾಡುತ್ತಿರುವ ದೂರುಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ಸಂಚರಿಸುವ ಆಟೋ ರಿಕ್ಷಾಗಳ ಜೊತೆಗೆ ಇನ್ಮುಂದೆ ಓಲಾ, ಉಬರ್, ನಮ್ಮ ಯಾತ್ರಿ ಸೇರಿದಂತೆ ಎಲ್ಲಾ ಅಗ್ರಿಗೇಟರ್ ಕ್ಯಾಬ್‌ಗಳಿಗೂ ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಸಾರಿಗೆ ಸಚಿವ ಭೈರತಿ ಸುರೇಶ್ ಮಹತ್ವದ ಆದೇಶ ಹೊರಡಿಸಿದ್ದಾರೆ.
ನಗರದಲ್ಲಿ ಸಂಚರಿಸುವ ಯಾವುದೇ ಆಟೋ ಅಥವಾ ಕ್ಯಾಬ್‌ಗಳು ಮೀಟರ್ ಇಲ್ಲದೆ ರಸ್ತೆಗಿಳಿಯುವಂತಿಲ್ಲ ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಶೇಷವಾಗಿ ಆಟೋ ಚಾಲಕರು ಪ್ರಯಾಣಿಕರನ್ನು ಹತ್ತಿಸಿಕೊಂಡ ತಕ್ಷಣ ಕಡ್ಡಾಯವಾಗಿ ಮೀಟರ್ ಹಾಕಿಯೇ ಸಂಚರಿಸಬೇಕು. ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ಟ್ಯಾಕ್ಸಿಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಮೀಟರ್ ಅಳವಡಿಸದ ಹಾಗೂ ಮೀಟರ್ ಹಾಕದೆ ಸಂಚರಿಸುವ ವಾಹನಗಳಿಗೆ ನಗರದಲ್ಲಿ ಅವಕಾಶ ನೀಡುವುದಿಲ್ಲ ಮತ್ತು ದಂಡ ವಿಧಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅಗ್ರಿಗೇಟರ್ ಕಂಪನಿಗಳ ಮನಸೋಇಚ್ಛೆ ದರ ಏರಿಕೆ ಮತ್ತು ಹೆಚ್ಚುವರಿ ಶುಲ್ಕದ ಹೊರೆಯಿಂದ ಪ್ರಯಾಣಿಕರನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಈ ಹೊಸ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ, ಅಗತ್ಯವಿರುವ ಕರಡು ನಿಯಮಾವಳಿಗಳನ್ನು ತಕ್ಷಣವೇ ಸಿದ್ಧಪಡಿಸುವಂತೆ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಚಿವ ಭೈರತಿ ಸುರೇಶ್ ನಿರ್ದೇಶನ ನೀಡಿದ್ದಾರೆ.