ದಾವಣಗೆರೆ : ಬಂಜಾರ ಸಮುದಾಯದ ಪವಿತ್ರ ಕ್ಷೇತ್ರವಾದ ಭಾಯ್ಗಡ್ ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ (ರಿ.) ನೂತನ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯು ನವೆಂಬರ್ 13, 2026 ರಂದು ಅತ್ಯಂತ ಯಶಸ್ವಿಯಾಗಿ ಹಾಗೂ ಶಾಂತಿಯುತವಾಗಿ ಜರುಗಿತು. ಈ ಚುನಾವಣೆಯಲ್ಲಿ ಸಮಿತಿಯ ಅಧ್ಯಕ್ಷರಾಗಿ ಪ್ರಭು ಚೌವ್ಹಾಣ್ ಅವರೊಂದಿಗೆ ಇತರ ಪ್ರಮುಖ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾವೇರಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ್ ನಾಯ್ಕ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿ, ನಿಯಮಾನುಸಾರ ಈ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಆಡಳಿತ ಮಂಡಳಿಯ ವಿವರ ಇಂತಿದೆ: ಅಧ್ಯಕ್ಷರಾಗಿ ಪ್ರಭು ಚೌವ್ಹಾಣ್, ಪ್ರಧಾನ ಕಾರ್ಯದರ್ಶಿಯಾಗಿ ಭೋಜ್ಯನಾಯ್ಕ ಹಾಗೂ ಖಜಾಂಚಿಯಾಗಿ ಶಿವಮೊಗ್ಗದ ಹನುಮಾನಾಯ್ಕ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರ ಸ್ಥಾನಗಳಿಗೆ ಕೇಂದ್ರ ಸ್ಥಾನದಿಂದ ಭೂಪಾಲ್ ನಾಯ್ಕ, ದಕ್ಷಿಣ ಕ್ಷೇತ್ರದಿಂದ ಚಿತ್ರದುರ್ಗದ ಅನಿಲ್ ಕುಮಾರ್ ಹಾಗೂ ಉತ್ತರ ಕ್ಷೇತ್ರದಿಂದ ವಿಜಯನಗರದ ಲಕ್ಷ್ಮಣನಾಯ್ಕ ಡಿ. ಹೆಚ್. ಅವರು ಆಯ್ಕೆಯಾಗಿದ್ದಾರೆ. ಇನ್ನು ಜಂಟಿ ಕಾರ್ಯದರ್ಶಿಗಳಾಗಿ ಕೇಂದ್ರ ಸ್ಥಾನದಿಂದ ಪುಷ್ಪಬಾಯಿ ಜಗದೀಶ್, ಉತ್ತರ ಕ್ಷೇತ್ರದಿಂದ ಕಲಬುರಗಿಯ ಅಮರನಾಥ್ ಹಾಗೂ ದಕ್ಷಿಣ ಕ್ಷೇತ್ರದಿಂದ ಚಿಕ್ಕಮಗಳೂರಿನ ಮಂಜುನಾಥ್ ನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದ ಬಳಿಕ ಮಾತನಾಡಿದ ನೂತನ ಪದಾಧಿಕಾರಿಗಳು, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠದ ಸಮಗ್ರ ಅಭಿವೃದ್ಧಿಗೆ ಹಾಗೂ ಬಂಜಾರ ಸಮುದಾಯದ ಬಲವರ್ಧನೆ ಮತ್ತು ಸಂಘಟನೆಗೆ ನಾವೆಲ್ಲರೂ ಒಗ್ಗಟ್ಟಿನಿಂದ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು. ನೂತನ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳಿಗೆ ಸಮಾಜದ ಹಿರಿಯ ಮುಖಂಡರು, ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.