ಚಿಕ್ಕಮಗಳೂರು: ಧರ್ಮ ಮತ್ತು ಸಂಸ್ಕೃತಿಯ ಪುರಾತನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ದೇವಾಲಯಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಾ. C.T. ರವಿ ಹೇಳಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮಳಲೂರಿನಲ್ಲಿ ಶ್ರೀ ಮಳಲೂರಮ್ಮನ ನೂತನ ದೇವಾಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೇವಾಲಯಗಳು ಮನುಷ್ಯನ ಅಂತರಂಗದ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ ಎಂದರು.
‘ಧರ್ಮೋ ರಕ್ಷತಿ ರಕ್ಷಿತಃ’ ಸೂಕ್ತಿಯಂತೆ ಇನ್ನೊಬ್ಬರಿಗೆ ಕೆಡುಕು ಬಯಸದೆ, ಎಲ್ಲ ಜೀವಿಗಳ ಒಳಿತಿಗಾಗಿ ಬದುಕುವುದೇ ಧರ್ಮದ ನಿಜವಾದ ಸಾರ. ಬಸವಣ್ಣನವರ ವಚನದಂತೆ ಅಂತರಂಗ ಮತ್ತು ಬಹಿರಂಗ ಶುದ್ಧಿಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಮಳಲೂರಮ್ಮ, ಚಿಕ್ಕಮ್ಮ, ದೊಡ್ಡಮ್ಮ ಹಾಗೂ ಕಂಬಾಳಮ್ಮ ಹೆಸರಿನಲ್ಲಿ ಆರಾಧಿಸಲ್ಪಡುವ ಈ ದೇವತೆಯು ಈ ಭಾಗದ ಜನರ ನಾಡದೇವತೆಯಾಗಿದ್ದಾಳೆ. ಸುಮಾರು ₹3.5 ಕೋಟಿ ವೆಚ್ಚದಲ್ಲಿ ಸಂಪೂರ್ಣ ಕಲ್ಲಿನಿಂದ ನೂತನ ದೇವಾಲಯ ನಿರ್ಮಿಸಲು ಸಂಕಲ್ಪ ಮಾಡಲಾಗಿದ್ದು, ಭಕ್ತರು ಹಾಗೂ ಗ್ರಾಮಸ್ಥರು ಇದಕ್ಕೆ ಸಹಕಾರ ನೀಡಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ S.L. ಭೋಜೇಗೌಡ, ನಾಡಪಟೇಲರಾದ ಪರಮೇಶ್, ಮುಖಂಡರಾದ ಕೃಷ್ಣೇಗೌಡ, ಶರಣ್, ಚಂದ್ರೇಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.