image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ಬದಲಾಯಿಸ್ತೀನಿ - ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ಬದಲಾಯಿಸ್ತೀನಿ - ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಇನ್ಮೇಲೆ ಪ್ರತಿ ತಿಂಗಳ ಕೊನೆಗೆ ನಾನೇ one to one ಪ್ರಗತಿ ಪರಿಶೀಲನೆ ನಡೆಸ್ತೇನೆ. ಪ್ರಗತಿ ಕಾಣಿಸದಿದ್ದರೆ ಮುಲಾಜಿಲ್ಲದೆ ನಿಮ್ಮನ್ನು ಬದಲಾಯಿಸ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಟಿ ಆಯುಕ್ತರುಗಳಿಗೆ ಸ್ಪಷ್ಟ ಸೂಚನೆ ನೀಡಿದರು. ವಿಧಾನಸೌಧದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಯಿತು.

2024-25ನೇ ಸಾಲಿನಲ್ಲಿ ಒಟ್ಟು ರೂ.1,10,000 ಕೋಟಿ ತೆರಿಗೆ ಸಂಗ್ರಹ ಗುರಿ ಇದೆ. ಅಕ್ಟೋಬರ್‌ ಅಂತ್ಯದವರೆಗೆ ಒಟ್ಟು ರೂ.58,773 ಕೋಟಿ ಸಂಗ್ರಹಿಸಲಾಗಿದ್ದು, ಇದರಲ್ಲಿ ಜಿಎಸ್‌ಟಿ ರೂ.44,783 ಕೋಟಿ, ಕೆಎಸ್‌ಟಿ ರೂ.13,193 ಕೋಟಿ, ವೃತ್ತಿ ತೆರಿಗೆ ರೂ.797 ಕೋಟಿ ಸೇರಿದೆ ಎಂದರು.

ಅಕ್ಟೋಬರ್‌ ಕೊನೆಯವರೆಗೆ ಶೇ.53.5 ಗುರಿ ಸಾಧನೆಯಾಗಿದೆ. 2023-24ನೇ ಸಾಲಿಗೆ ಹೋಲಿಸಿದರೆ ರೂ.5,957 ಕೋಟಿ ಹೆಚ್ಚುವರಿ ಸಂಗ್ರಹವಾಗಿರುತ್ತದೆ. ಮುಂದಿನ ಐದು ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು ರೂ.10200 ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಇರಿಸಿ ಮಾರ್ಚ್‌ ಒಳಗಾಗಿ ಗುರಿಯನ್ನು ಸಾಧಿಸಬೇಕು. ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಾತ್ರ ಗುರಿ ಸಾಧನೆ ಸಾಧ್ಯ. ಈ ಬಾರಿ ಉತ್ತಮ ಮಳೆಯಾಗಿದೆ. ಗುರಿ ಮೀರಿ ತೆರಿಗೆ ಸಂಗ್ರಹ ಮಾಡಲು ರಾಜ್ಯದ ಅಭಿವೃದ್ಧಿಗೆ ತೆರಿಗೆ ಸಂಗ್ರಹದಲ್ಲಿ ಈ ಗುರಿ ಸಾಧಿಸಬೇಕಿದೆ ಎಂದು ಹೇಳಿದರು.

ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ನಡೆಸಲಿದ್ದೇನೆ. ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗುರಿಗಿಂತ ಕಡಿಮೆಯಾಗಲೇಬಾರದು. ಕರ ಸಮಾಧಾನ ಯೋಜನೆ ಅಡಿ ರೂ. 2 ಸಾವಿರ ಕೋಟಿ ಹೆಚ್ಚುವರಿ ಸಂಗ್ರಹಣೆಯ ನಿರೀಕ್ಷೆ ಇದೆ ಎಂದು ತಿಳಿಸಿದರು.

Category
ಕರಾವಳಿ ತರಂಗಿಣಿ