image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಗೆ ಬಿಜೆಪಿಯಿಂದ ಪಾದಯಾತ್ರೆ: ಕಾಂಗ್ರೆಸ್‌ಗೆ ಸಿ.ಟಿ. ರವಿ ಸವಾಲು

ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆಗೆ ಬಿಜೆಪಿಯಿಂದ ಪಾದಯಾತ್ರೆ: ಕಾಂಗ್ರೆಸ್‌ಗೆ ಸಿ.ಟಿ. ರವಿ ಸವಾಲು

ಶಿವಮೊಗ್ಗ : ಸಾಂವಿಧಾನಿಕ ಸಂಸ್ಥೆಗಳು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬಿಜೆಪಿ ಶಿವಮೊಗ್ಗ ವಿಭಾಗದ ವತಿಯಿಂದ ಶಿವಮೊಗ್ಗದಲ್ಲಿ ‘ಪ್ರಜಾಪ್ರಭುತ್ವ ಉಳಿಸಿ–ಅರಾಜಕತೆ ತೊಲಗಿಸಿ’ ಪಾದಯಾತ್ರೆ ನಡೆಯಿತು. ಪಾದಯಾತ್ರೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ, ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗ ಹಾಗೂ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಮಾಡುತ್ತಿರುವ ಆರೋಪಗಳನ್ನು ಕಟುವಾಗಿ ಟೀಕಿಸಿದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ರಾಜ್ಯ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡಿದ ಅವರು, ಈ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬೂತ್ ಮಟ್ಟದ ಅಧಿಕಾರಿಗಳು (BLO) ರಾಜ್ಯ ಸರ್ಕಾರದ ಶಿಕ್ಷಣ ಮತ್ತು ಕಂದಾಯ ಇಲಾಖೆಯ ನೌಕರರೇ ಆಗಿದ್ದಾರೆ. ಅಕ್ರಮ ನಡೆದಿದೆ ಎಂದಾದರೆ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸವಾಲು ಹಾಕಿದರು. ಅಲ್ಲದೆ, ಪಟ್ಟಿಯಿಂದ ತೆರವುಗೊಂಡಿರುವ 99.32 ಲಕ್ಷ ಮತದಾರರಲ್ಲಿ ಕನಿಷ್ಠ 9 ಲಕ್ಷ ಜನರಾದರೂ ತಪ್ಪು ತೆರವು ಎಂದು ಅರ್ಜಿ ಸಲ್ಲಿಸಿ ಸಾಬೀತುಪಡಿಸಿದರೆ 2028ರ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇವಿಎಂ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಿದ್ದರೆ ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಕೇರಳದ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ರಾಜೀನಾಮೆ ನೀಡಿ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ಎದುರಿಸಲಿ ಎಂದು ಅವರು ಆಗ್ರಹಿಸಿದರು. ದೇಶದಲ್ಲಿ ಅಧಿಕಾರ ಬದಲಾವಣೆ ಮತದಾನದ ಮೂಲಕವೇ ಆಗಬೇಕೇ ಹೊರತು ಬೀದಿಗಳಲ್ಲಿ ಅರಾಜಕತೆ ಸೃಷ್ಟಿಸುವುದರಿಂದ ಅಲ್ಲ ಎಂದರು.

ಈ ಪಾದಯಾತ್ರೆಯಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಎಸ್.ಎನ್. ಚನ್ನಬಸಪ್ಪ ಸೇರಿದಂತೆ ಹಲವು ಪಕ್ಷದ ಪ್ರಮುಖ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ