ಶಿವಮೊಗ್ಗ: ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಶ್ರೀ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್‌ನ ನೂತನ ರಾಮಕೃಷ್ಣ ಪಿಯು ಕಾಲೇಜು ಹಾಗೂ ವಿದ್ಯಾರ್ಥಿನಿಲಯದ ಭವ್ಯ ಕಟ್ಟಡಗಳನ್ನು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಡಾ. ನಿರ್ಮಲನಂದನಾಥ ಮಹಾ ಸ್ವಾಮೀಜಿ ಅವರು ಲೋಕಾರ್ಪಣೆಗೊಳಿಸಿದರು.
ಕಳೆದ 24 ವರ್ಷಗಳಿಂದ ಪಿ ಕೆಜಿಯಿಂದ ಎಸ್ ಎಸ್ ಎಲ್ ಸಿ ವರೆಗೆ ಹಾಗೂ ಗುರುಕುಲ ವಸತಿ ವಿದ್ಯಾಲಯಗಳಲ್ಲಿ ಆಧ್ಯಾತ್ಮದ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತಿರುವ ರಾಮಕೃಷ್ಣ ಸಂಸ್ಥೆಗೆ ಪಿಯು ಕಾಲೇಜು ಸೇರ್ಪಡೆಯಾಗಿರುವುದು ಸ್ವಾಗತಾರ್ಹ. ಇದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೊಸ ದಾರಿದೀಪವಾಗಲಿದೆ ಎಂದು ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ವಾಮಿ ವಿವೇಕಾನಂದರ ಪೂರ್ವ ಮತ್ತು ನಂತರದ ಅವಧಿಗಳನ್ನು ಅವಲೋಕಿಸಿದರೆ ವಿಜ್ಞಾನ, ಶಿಕ್ಷಣ ಹಾಗೂ ಬದುಕಿನ ಅರ್ಥ ಸ್ಪಷ್ಟವಾಗುತ್ತದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಲ್ಲುಗಂಗೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ವಿನಯಾನಂದ ಸರಸ್ವತಿ ಮಹಾರಾಜ್ ಮಾತನಾಡಿ, ಚಾರಿತ್ರ್ಯವಂತ ತೇಜಸ್ವಿ ಯುವ ಪಡೆಯನ್ನು ಬೆಳೆಸುವ ಕಾರ್ಯ ಇಲ್ಲಾಗುತ್ತಿದೆ ಎಂದರು. ಇದೇ ವೇಳೆ ಅವರು ಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ ಅವರ ಮಕ್ಕಳ ಪ್ರೀತಿ ಮತ್ತು ಕಾಳಜಿಯನ್ನು ಶ್ಲಾಘಿಸಿ "ಮಕ್ಕಳ ದೇವತೆ" ಎಂದು ಬಣ್ಣಿಸಿದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಟ್ರಸ್ಟ್ ಸದಸ್ಯ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, 1991ರಲ್ಲಿ ಕೇವಲ 8 ವಿದ್ಯಾರ್ಥಿಗಳಿಂದ ಆರಂಭವಾದ ಸಂಸ್ಥೆಯಲ್ಲಿ ಇಂದು 15 ಸಾವಿರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ನಾಗೇಶ್ ಅವರು ಪೋಷಕರ ಅಪೇಕ್ಷೆಯಂತೆ ಕಾಲೇಜು ಆರಂಭಿಸಲಾಗಿದೆ ಎಂದರು. ವ್ಯವಸ್ಥಾಪಕ ಟ್ರಸ್ಟಿ ಶೋಭಾ ಆರ್. ವೆಂಕಟರಮಣ ಎಲ್ಲರನ್ನೂ ಸ್ವಾಗತಿಸಿ, ಅಭಿನಂದಿಸಿದರು.