image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಸ್‌ಐಆರ್‌ ವಿವಾದ: ರಾಜ್ಯ ಸರ್ಕಾರವೇ ಹೊಣೆ ಎಂದ ಸಿ.ಟಿ. ರವಿ

ಎಸ್‌ಐಆರ್‌ ವಿವಾದ: ರಾಜ್ಯ ಸರ್ಕಾರವೇ ಹೊಣೆ ಎಂದ ಸಿ.ಟಿ. ರವಿ

ಬೆಂಗಳೂರು : ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿನ ಲೋಪಗಳಿಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕೇ ಹೊರತು ಚುನಾವಣಾ ಆಯೋಗವನ್ನು ಗುರಿಯಾಗಿಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಆಕಾಶ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಆಯೋಜಿಸಲಾಗಿದ್ದ ‘ಮೈ ಭಾರತ್ – ವಿಕಸಿತ ಭಾರತ್ ಯುವ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಎಸ್‌ಐಆರ್‌ ವಿಕೇಂದ್ರೀಕೃತ ವ್ಯವಸ್ಥೆಯಾಗಿದ್ದು, ರಾಜ್ಯ ಸರ್ಕಾರದ ಅಧೀನದಲ್ಲಿರುವ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು), ಶಿಕ್ಷಕರು ಮತ್ತು ಕಂದಾಯ ಅಧಿಕಾರಿಗಳೇ ಈ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಿದ್ದಾರೆ. 99 ಲಕ್ಷ ಮತದಾರರನ್ನು ಗೈರುಹಾಜರಿ, ಸ್ಥಳಾಂತರ, ಮರಣ ಹಾಗೂ ನಕಲಿ ಎಂಬ ಕಾರಣಗಳಡಿ ಗುರುತಿಸಲಾಗಿದ್ದು, ತಪ್ಪಾಗಿ ಹೆಸರು ತೆಗೆದುಹಾಕಿದ್ದರೆ ಅದಕ್ಕೆ ಯಾರು ಹೊಣೆ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ತಮ್ಮ ಚಿಕ್ಕಮಗಳೂರು ಕ್ಷೇತ್ರದಲ್ಲಿ ನಡೆಸಿದ ವೈಯಕ್ತಿಕ ಸಮೀಕ್ಷೆಯಲ್ಲಿ ಶೇ.99ರಷ್ಟು ಪ್ರಕರಣಗಳು ಸರಿಯಾಗಿವೆ ಎಂದು ತಿಳಿಸಿದ ಅವರು, ಕನಿಷ್ಠ 9 ಲಕ್ಷ ಜನರಿಂದಲಾದರೂ ಆಕ್ಷೇಪ ಅರ್ಜಿಗಳನ್ನು ಸಲ್ಲಿಸಿ ತಮ್ಮ ಆರೋಪ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ಸವಾಲು ಹಾಕಿದರು. ಅರಾಜಕತೆಯ ಮೂಲಕ ಅಧಿಕಾರ ಬದಲಾಯಿಸಲು ಸಾಧ್ಯವಿಲ್ಲ, ಸಂವಿಧಾನದಲ್ಲಿ ಮತದಾನವೊಂದೇ ಅದಕ್ಕೆ ಮಾರ್ಗ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳು ‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಮತ ಚಲಾಯಿಸಬೇಕು ಹಾಗೂ ಅರಾಜಕತೆಯ ರಾಜಕಾರಣವನ್ನು ತಿರಸ್ಕರಿಸಿ ಸತ್ಯದ ಪರವಾಗಿ ನಿಲ್ಲಬೇಕು ಎಂದು ಕರೆ ನೀಡಿದರು. ಕೇವಲ ಬೆಂಗಳೂರಿಗೆ ಸೀಮಿತವಾಗದೆ ಕರಾವಳಿ, ಮಲೆನಾಡು, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗಗಳಿಗೂ ಸಮಾನ ಅಭಿವೃದ್ಧಿಯಾಗಬೇಕು ಎಂದರು.

Category
ಕರಾವಳಿ ತರಂಗಿಣಿ