image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕುಮಾರಸ್ವಾಮಿ ಹೇಳಿಕೆ ಕಪೋಲಕಲ್ಪಿತ: ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ

ಕುಮಾರಸ್ವಾಮಿ ಹೇಳಿಕೆ ಕಪೋಲಕಲ್ಪಿತ: ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ

ಬೆಂಗಳೂರು : ಹೋಂಡಾ ಮೋಟಾರ್ಸ್ ಸಂಸ್ಥೆಯು ಕರ್ನಾಟಕವನ್ನು ತೊರೆದು ಬೇರೆಡೆಗೆ ತೆರಳಲಿದೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯು ರಾಜಕೀಯ ದುರುದ್ದೇಶದಿಂದ ಕೂಡಿದ್ದು, ಸಂಪೂರ್ಣ ಕಪೋಲಕಲ್ಪಿತವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಟೀಕಿಸಿದ್ದಾರೆ. ಇಂತಹ ಹೊಣೆಗೇಡಿತನದ ಹೇಳಿಕೆಗಳು ರಾಜ್ಯದ ಕೈಗಾರಿಕಾ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಹೋಂಡಾ ಕಂಪೆನಿಗೆ 2011ರಿಂದ ಹಂತ-ಹಂತವಾಗಿ 135 ಎಕರೆ ಜಾಗವನ್ನು ಒದಗಿಸಲಾಗಿದೆ. ಅಲ್ಲಿ 2013ರಿಂದ ದ್ವಿಚಕ್ರ ವಾಹನಗಳ ಉತ್ಪಾದನೆ ನಡೆಯುತ್ತಿದ್ದು, ಪ್ರಸ್ತುತ ದಿನಕ್ಕೆ 10,000 ವಾಹನಗಳನ್ನು ತಯಾರಿಸಲಾಗುತ್ತಿದೆ. ಈ ಘಟಕದ ಮೂಲಕ ಸುಮಾರು 7,800ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದಷ್ಟೇ ಅಲ್ಲದೆ, ದೊಡ್ಡಬಳ್ಳಾಪುರ ತಾಲೂಕಿನ ಆದಿನಾರಾಯಣ ಹೊಸಹಳ್ಳಿಯಲ್ಲಿ 35 ಎಕರೆ ಪ್ರದೇಶದಲ್ಲಿ ಕಂಪೆನಿಯು ಬಿಡಿ ಭಾಗಗಳ ದಾಸ್ತಾನು ಮತ್ತು ಸರಬರಾಜು ಘಟಕವನ್ನು ಹೊಂದಿದ್ದು, ಇಡೀ ದಕ್ಷಿಣ ಭಾರತಕ್ಕೆ ಇಲ್ಲಿಂದಲೇ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಹೋಂಡಾ ಸಂಸ್ಥೆಗೂ ಕರ್ನಾಟಕಕ್ಕೂ ಉತ್ತಮ ಬಾಂಧವ್ಯವಿದ್ದು, ಕುಮಾರಸ್ವಾಮಿ ಅವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಸಲಹೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಹೋಂಡಾ ಕಂಪೆನಿಯು ತನ್ನ ಇ.ವಿ. (ವಿದ್ಯುತ್ ಚಾಲಿತ) ದ್ವಿಚಕ್ರ ವಾಹನ ತಯಾರಿಕೆಯನ್ನು ನರಸಾಪುರದ ಕ್ಯಾಂಪಸ್‌ನಲ್ಲೇ ವಿಸ್ತರಿಸಲು ಒಲವು ತೋರಿದೆ. ಸರ್ಕಾರದಿಂದ ಯಾವುದೇ ಲೋಪವಾಗಿಲ್ಲ ಹಾಗೂ ಕಂಪೆನಿಗೂ ರಾಜ್ಯ ತೊರೆಯುವ ಯಾವುದೇ ಆಲೋಚನೆಯಿಲ್ಲ.

ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಹೊಸ ಉದ್ಯಮಗಳನ್ನು ತರುವ ಬದಲು, ಎಲ್ಲ ಉದ್ಯಮಗಳು ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಒಡಿಶಾಗೆ ತೆರಳುತ್ತಿವೆ ಎಂದು ಅನಗತ್ಯ ಗೊಂದಲ ಸೃಷ್ಟಿಸುವುದು ರಾಜ್ಯದ ಹಿತಾಸಕ್ತಿಗೆ ಧಕ್ಕೆ ತಂದಂತೆ ಎಂದು ಎಂ.ಬಿ. ಪಾಟೀಲ್ ಖಂಡಿಸಿದ್ದಾರೆ.

Category
ಕರಾವಳಿ ತರಂಗಿಣಿ