image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಿಂಚಣಿ ಸರ್ಕಾರದ ಭಿಕ್ಷೆಯಲ್ಲ: ರಾಜ್ಯ ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್

ಪಿಂಚಣಿ ಸರ್ಕಾರದ ಭಿಕ್ಷೆಯಲ್ಲ: ರಾಜ್ಯ ಸರ್ಕಾರದ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು : ಉದ್ಯೋಗಿಯೊಬ್ಬರು ತಾಂತ್ರಿಕ ಕಾರಣಗಳಿಗಾಗಿ ಒಂದು ವಿಶ್ವವಿದ್ಯಾಲಯದಿಂದ ಮತ್ತೊಂದಕ್ಕೆ ಸೇರಿದ ತಕ್ಷಣ ಅವರ ಹಿಂದಿನ ಸೇವಾವಧಿ ರದ್ದಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿವೃತ್ತ ಪ್ರೊಫೆಸರ್ ಒಬ್ಬರಿಗೆ ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲೇ ಸೌಲಭ್ಯ ಕಲ್ಪಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ಪೀಠ, "ಪಿಂಚಣಿ ಎಂಬುದು ಸರ್ಕಾರ ನೀಡುವ ಭಿಕ್ಷೆಯಲ್ಲ, ಅದು ಉದ್ಯೋಗಿಯ ಅರ್ಹ ಹಕ್ಕು" ಎಂದು ಖಾರವಾಗಿ ಹೇಳಿ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿದೆ.

ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಒಟ್ಟು 28 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ. ಚಿದಾನಂದರೆಡ್ಡಿ ಎಸ್. ಪಾಟೀಲ್ ಅವರ ಪ್ರಕರಣದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಪೂರ್ವಭಾವಿ ಅನುಮತಿಯೊಂದಿಗೆ ತಾಂತ್ರಿಕ ಕಾರಣಕ್ಕೆ ರಾಜೀನಾಮೆ ನೀಡಿ ಮತ್ತೊಂದು ವಿಶ್ವವಿದ್ಯಾಲಯದಲ್ಲಿ ಉನ್ನತ ಹುದ್ದೆಗೆ ಸೇರಿದಾಗ ಸೇವಾ ನಿರಂತರತೆ ಕಾಯ್ದುಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದ ಪೀಠ, 1996ರಿಂದ 2013ರವರೆಗಿನ 17 ವರ್ಷಗಳ ಸೇವೆಯನ್ನು ಕಡೆಗಣಿಸಿ ಅದನ್ನು 'ಹೊಸ ನೇಮಕಾತಿ' ಎಂದು పరిగణಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ನೇಮಕಾತಿ ಆದೇಶದಲ್ಲಿ ನೂತನ ಪಿಂಚಣಿ ಯೋಜನೆ (NPS) ಅನ್ವಯವಾಗುತ್ತದೆ ಎಂಬ ಷರತ್ತು ನಮೂದಿಸಿದ್ದರೂ ಅದು ಶಾಸನಬದ್ಧ ಹಕ್ಕಿಗಿಂತ ದೊಡ್ಡದಲ್ಲ ಹಾಗೂ ಆಡಳಿತಾತ್ಮಕ ಷರತ್ತುಗಳ ಮೂಲಕ ಅರ್ಹ ಸೌಲಭ್ಯವನ್ನು ಕಸಿದುಕೊಳ್ಳಲಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ 1996ರಿಂದ ನಿವೃತ್ತಿಯವರೆಗಿನ ಸಂಪೂರ್ಣ ಸೇವೆಯನ್ನು పరిగಣಿಸಿ, ಹಳೆಯ ಪಿಂಚಣಿ ಯೋಜನೆಯಡಿಯಲ್ಲೇ ಬಾಕಿ ಇರುವ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಮುಂದಿನ 8 ವಾರಗಳಲ್ಲಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ. ಅಲ್ಲದೆ, ಬಾಕಿ ಮೊತ್ತಕ್ಕೆ ನಿವೃತ್ತಿ ದಿನಾಂಕದಿಂದ ಪಾವತಿಯಾಗುವವರೆಗೆ ಶೇಕಡಾ 6ರಷ್ಟು ಬಡ್ಡಿ ಸೇರಿಸಿ ನೀಡಲು ಆದೇಶಿಸಿದೆ. ಆದೇಶ ಪಾಲನೆಯಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಬಡ್ಡಿ ದರವನ್ನು ಶೇಕಡಾ 12ಕ್ಕೆ ಏರಿಸಲಾಗುವುದು ಮತ್ತು ವ್ಯಾಜ್ಯ ವೆಚ್ಚವಾಗಿ ಅರ್ಜಿದಾರರಿಗೆ ₹1 ಲಕ್ಷ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಸಿದೆ.

Category
ಕರಾವಳಿ ತರಂಗಿಣಿ