ಕಲಬುರಗಿ : ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ತಾಂತ್ರಿಕ ಸಾಕ್ಷ್ಯಗಳು ಕೇವಲ ಟ್ರೇಲರ್ ಅಷ್ಟೇ, 'ಪಿಚ್ಚರ್ ಅಭಿ ಬಾಕಿ ಹೇ' ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತನಿಖೆಯ ಪ್ರಗತಿ ಕುರಿತು ವಿವರಿಸಿದ ಅವರು, "ಸ್ಟಿಂಗ್ ವಿಚಾರದಲ್ಲಿ ಈಗಾಗಲೇ ಎಫ್ಐಆರ್ ದಾಖಲಾಗಿತ್ತು. ತನಿಖೆಗೆ ಹಾಜರಾಗದೆ ಕೆಲವರು ತಪ್ಪಿಸಿಕೊಂಡು ಓಡಾಡುತ್ತಿದ್ದರು. ಪ್ರಕರಣದ ನೈಜತೆ ಹೊರಬರಲು ಜೆಡಿಎಸ್ ಕಾರ್ಯಕರ್ತರು ತನಿಖೆಗೆ ಸಹಕರಿಸಬೇಕಿತ್ತು. ಆದರೆ, ವಿಚಾರಣೆ ವೇಳೆ ಇವರೆಲ್ಲರ ನಂಟು ದೆಹಲಿ ಮೂಲದ ವ್ಯಕ್ತಿಯೊಬ್ಬನಿಗೆ ಇರುವುದು ಬೆಳಕಿಗೆ ಬಂದಿದೆ. ಆತನ ನೀಡಿದ ಹೇಳಿಕೆಯ ಆಧಾರದ ಮೇಲೆ ಮತ್ತೊಬ್ಬ ವ್ಯಕ್ತಿಯ ಸುಳಿವು ಸಿಕ್ಕಿದೆ" ಎಂದು ತಿಳಿಸಿದ್ದಾರೆ.
ಆರೋಪಿಗಳು ಕ್ಯಾರೋಲ್ ಭಾಗ್ನಲ್ಲಿ ಮೊಬೈಲ್ ಖರೀದಿಸಿ, ಅಲ್ಲಿಂದ ನೇರವಾಗಿ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿದ್ದಾರೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಸಿಸಿಟಿವಿ ಫೂಟೇಜ್ ಹಾಗೂ ಡಿಜಿಟಲ್ ಸಾಕ್ಷ್ಯಾಧಾರಗಳು ಪೊಲೀಸರ ಬಳಿ ಇವೆ. ಇವರೆಲ್ಲರಿಗೂ ಆರ್ಥಿಕ ನೆರವು (ಫಂಡಿಂಗ್) ಎಲ್ಲಿಂದ ಬಂತು ಎಂಬ ಸಂಪೂರ್ಣ ಮಾಹಿತಿ ಲಭ್ಯವಿದ್ದು, ಸಿಕ್ಕಿಬಿದ್ದವರೆಲ್ಲರೂ ಕುಮಾರಸ್ವಾಮಿ ಅವರ ಜೊತೆಗಿರುವವರೇ ಆಗಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.
ಕುಮಾರಸ್ವಾಮಿ ಅವರ ರಾಜಕೀಯ ಶೈಲಿಯನ್ನು ತೀವ್ರವಾಗಿ ತಖ್ತಿಸಿದ ಪ್ರಿಯಾಂಕ್ ಖರ್ಗೆ, "ನಮ್ಮ ಹಾಗೂ ನಮ್ಮ ತಂದೆಯವರ ಮೇಲೆ ಸುಳ್ಳು ಆರೋಪಗಳನ್ನು ಮಾಡಿ ಮುಗಿಬಿದ್ದರು. ನಿರಪರಾಧಿಯಾಗಿದ್ದರೆ ಇವರೆಲ್ಲರೂ ನಿರೀಕ್ಷಣಾ ಜಾಮೀನಿಗಾಗಿ (ಆಂಟಿಸಿಪೇಟರಿ ಬೇಲ್) ಏಕೆ ಅಲೆಯುತ್ತಿದ್ದಾರೆ? ಪ್ರಕರಣದಲ್ಲಿ ಸಿಕ್ಕಿಬಿದ್ದವರೆಲ್ಲ ಜೆಡಿಎಸ್ ಕಡೆಯವರೇ ಏಕೆ ಇದ್ದಾರೆ?" ಎಂದು ನೇರವಾಗಿ ಪ್ರಶ್ನಿಸಿದ್ದಾರೆ.
ತನಿಖೆಯ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಇದುವರೆಗೆ ಸುಮ್ಮನಿದ್ದೆವು. ಆದರೆ ಈಗ ಒಂದೊಂದಾಗಿ ಸತ್ಯ ಹೊರಬರುತ್ತಿದೆ. ಪ್ರಕರಣದ ತನಿಖೆ ಈಗಷ್ಟೇ ಇಂಟರ್ ವೆಲ್ ಹಂತಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕಾನೂನು ಪ್ರಕಾರ ಅಗತ್ಯ ಕ್ರಮ ಜರುಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.