ಹಾಸನ : ಹಾಸನಾಂಬ ದೇವಾಲಯದ ದರ್ಶನೋತ್ಸವಕ್ಕೆ ಸೂಕ್ತ ಆಹ್ವಾನ ನೀಡದ ಜಿಲ್ಲಾಡಳಿತದ ನಡೆಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಾರಿಯ ಹಾಸನಾಂಬೆ ದರ್ಶನಕ್ಕೆ ತೆರಳದಿರಲು ತೀರ್ಮಾನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ವರ್ಷಗಳ ಕಾಲ ರಾಜಕೀಯ ಮಾಡಿರುವ ತಮಗೆ ಗ್ರಾಮ ಸಹಾಯಕ ಅಥವಾ ಗುಮಾಸ್ತನ ಕೈಯಲ್ಲಿ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ ಎಂದು ಕಿಡಿಕಾರಿದರು. "ನನ್ನನ್ನು ಗೌರವಯುತವಾಗಿ ಕರೆಯದೆ ಇದ್ದಮೇಲೆ ನಾನು ಯಾಕೆ ಹೋಗಲಿ? ಆ ತಾಯಿಗೆ ಇಲ್ಲಿದ್ದೇ ಕೈ ಮುಗಿಯುತ್ತೇನೆ" ಎಂದು ಹೇಳಿದರು. ಜಿಲ್ಲೆಯಲ್ಲಿ ಜೆಡಿಎಸ್ನ 4 ಮತ್ತು ಬಿಜೆಪಿಯ 2 ಶಾಸಕರಿದ್ದರೂ ಜಾಹೀರಾತು ಫ್ಲೆಕ್ಸ್ಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಫೋಟೋ ಹಾಕದೆ ಇದನ್ನು ಪೂರ್ಣವಾಗಿ ಕಾಂಗ್ರೆಸ್ ಕಾರ್ಯಕ್ರಮದಂತೆ ಮಾಡಲಾಗಿದೆ ಎಂದು ಆರೋಪಿಸಿದರು. ಸಂಸದರ ಮನೆ ಬಾಗಿಲಿಗೆ ಹೋಗಿ ಪಾಸ್ ಕೊಡುವ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಸಮಾನವಾಗಿ ಪಾಸ್ ಹಂಚಿಕೆ ಮಾಡಬೇಕು, ಇಲ್ಲದಿದ್ದರೆ ಬುಧವಾರದಂದು ಕಾರ್ಯಕರ್ತರನ್ನು ದರ್ಶನಕ್ಕೆ ನುಗ್ಗಿಸುವುದಾಗಿ ಎಚ್ಚರಿಸಿದರು.
ಇದೇ ವೇಳೆ ರಾಜ್ಯ ಸರ್ಕಾರದ ಶಿಕ್ಷಣ ವ್ಯವಸ್ಥೆ ಮತ್ತು ಸೌಲಭ್ಯಗಳ ಕೊರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ರೇವಣ್ಣ, ಸ್ವಾತಂತ್ರ್ಯ ಬಂದು 77 ವರ್ಷಗಳಾಗಿದ್ದರೂ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿ ಖಾಸಗಿಯವರ ಕೈ ವಶವಾಗುತ್ತಿವೆ ಎಂದರು. ವಿದ್ಯಾರ್ಥಿನಿಲಯಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಹೆಣ್ಣುಮಕ್ಕಳು ಚಾಪೆಯ ಮೇಲೆ ಮಲಗುವ ಸ್ಥಿತಿ ಬಂದಿದೆ ಎಂದು ನೊಂದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಗಮನ ಸೆಳೆದ ಅವರು, ಮೊಸಳೆಹೊಸಳ್ಳಿಯ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಎಲ್ಲ ಸರ್ಕಾರಿ ಶಾಲೆಗಳಿಗೆ ತಕ್ಷಣವೇ ಶಿಕ್ಷಕರನ್ನು ನೇಮಿಸಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಇನ್ನು ಜಿಲ್ಲೆಯಲ್ಲಿ ಭೀಕರ ಬರಗಾಲವಿದ್ದು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಅಭಾವ ತಲೆದೋರಿದೆ. ಆದರೆ ಜಿಲ್ಲಾಡಳಿತ ಕಳೆದ ಎರಡು ತಿಂಗಳಿನಿಂದ ಕೇವಲ ಹಾಸನಾಂಬ ಜಾತ್ರೆಯ ಪ್ರಚಾರದಲ್ಲೇ ನಿರತವಾಗಿದೆ ಎಂದು ವಾಗ್ದಾಳಿ ನಡೆಸಿದರು. ಬರಗಾಲದ ಸಮಯದಲ್ಲಿ ಸಾರ್ವಜನಿಕರ ಹಿತ ಕಾಯಲು ವಿಫಲವಾಗಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಜನರಿಗೆ 'ಟೋಪಿ' ಹಾಕುತ್ತಿದೆ ಎಂದು ಕೆಂಡಾಮಂಡಲರಾದರು.