ಶಿವಮೊಗ್ಗ: ಶಿವಮೊಗ್ಗದ ರೋಟರಿ ಪೂರ್ವ ಆಂಗ್ಲ ಶಾಲೆಯಲ್ಲಿ ನಡೆದ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ರೋ. ಕೆ.ಬಿ. ರವಿಶಂಕರ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ಹೆಚ್.ಎಲ್. ರವಿ, ಜಿ. ವಿಜಯ್ ಕುಮಾರ್, ರೋ. ಎಸ್.ಸಿ. ರಾಮಚಂದ್ರ ಹಾಗೂ ಮಂಜುನಾಥ್ ಎನ್.ಬಿ. ಮುಂತಾದ ಗಣ್ಯರು ಮಾತನಾಡಿ, ಕನ್ನಡ ಭಾಷೆಯ ಹಿರಿಮೆ, ಕರ್ನಾಟಕ ಏಕೀಕರಣದ ಇತಿಹಾಸ, ಶ್ರೇಷ್ಠ ಕವಿಗಳ ಸಾಹಿತ್ಯ ಕೊಡುಗೆಗಳು ಮತ್ತು ದೈನಂದಿನ ಬದುಕಿನಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯತೆಯ ಕುರಿತು ತಿಳಿಸಿದರು.
ರೋಟರಿ ಮಲೆನಾಡು ಅಧ್ಯಕ್ಷೆ ರಶ್ಮಿ ಹಾಗೂ ಸಿದ್ದಲಿಂಗಮೂರ್ತಿ ಅವರು ಎಲ್ಲ ಭಾಷೆಗಳನ್ನು ಗೌರವಿಸುತ್ತಲೇ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ಭಾಷಣ ಹಾಗೂ ಹಾಡುಗಳ ಮೂಲಕ ಕನ್ನಡ ಭಾಷೆಯ ಮಹತ್ವವನ್ನು ಸಾರಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ನಾಗವೇಣಿ, ಪ್ರಾಂಶುಪಾಲರು, ಶಿಕ್ಷಕರು, ರೋಟರಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.