image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮುರುಸು ಚಂಡಮಾರುತದ ಭೀತಿ: ಕರ್ನಾಟಕದಲ್ಲೂ ತೀವ್ರ ಮಳೆ ಮುನ್ನೆಚ್ಚರಿಕೆ

ಮುರುಸು ಚಂಡಮಾರುತದ ಭೀತಿ: ಕರ್ನಾಟಕದಲ್ಲೂ ತೀವ್ರ ಮಳೆ ಮುನ್ನೆಚ್ಚರಿಕೆ

ಬೆಂಗಳೂರು : ಅರ್ನಾಬ್ ಚಂಡಮಾರುತ ಸೃಷ್ಟಿಸಿದ್ದ ಅವಾಂತರ ಶಮನಗೊಳ್ಳುತ್ತಿದ್ದಂತೆಯೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಹವಾಮಾನ ವೈಪರೀತ್ಯ ಉಂಟಾಗಿದ್ದು, ‘ಮುರುಸು’ ಚಂಡಮಾರುತ ಅಪ್ಪಳಿಸಲು ಸಜ್ಜಾಗಿದೆ. ಆಗ್ನೇಯ ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿದ್ದ ತೀವ್ರ ವಾಯುಭಾರ ಕುಸಿತವು ಇದೀಗ ಬಲಗೊಂಡು ಚಂಡಮಾರುತವಾಗಿ ರೂಪಾಂತರಗೊಳ್ಳುತ್ತಿದ್ದು, ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ತಲುಪಲಿದೆ.

ಈ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರ ನಡುವೆ ಗಂಟೆಗೆ 100 ರಿಂದ 120 ಕಿಲೋಮೀಟರ್ ವೇಗದಲ್ಲಿ ತೀವ್ರ ಬಿರುಗಾಳಿ ಬೀಸುವ ಸಾಧ್ಯತೆಯಿದೆ. ಇದರ ತೀವ್ರ ಪರಿಣಾಮ ನೆರೆಯ ಕರ್ನಾಟಕದ ಮೇಲೆಯೂ ಬೀರಲಿದ್ದು, ಇಡೀ ದಕ್ಷಿಣ ಭಾರತದ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಲಿದೆ.

ನವೆಂಬರ್ 1 ರಿಂದ ನವೆಂಬರ್ 4 ರ ಅವಧಿಯಲ್ಲಿ ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಗುಡುಗು-ಮಿಂಚಿನ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಬೆಂಗಳೂರು ಕೇಂದ್ರ ಎಚ್ಚರಿಕೆ ನೀಡಿದೆ.

ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ. ಅದೇ ರೀತಿ ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ ಹಾಗೂ ಕರಾವಳಿಯ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೂ ಗಂಟೆಗೆ 40 ಕಿಮೀ ವೇಗದ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Category
ಕರಾವಳಿ ತರಂಗಿಣಿ