ಬೆಂಗಳೂರು : ಅಪರಾಧ ಹಿನ್ನೆಲೆಯುಳ್ಳ ನಾಯಕರು ಶಾಸನಸಭೆ ಪ್ರವೇಶಿಸುತ್ತಿರುವ ವಿಚಾರ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ಹಾಲಿ 7 ಜನ ಶಾಸಕರು ಮಹಿಳೆಯರ ಮೇಲಿನ ಅಪರಾಧ ಹಾಗೂ ಕಿರುಕುಳಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಆಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಸಂಸ್ಥೆಯ ನೂತನ ವರದಿಯು ಆತಂಕಕಾರಿ ಸತ್ಯವನ್ನು ಹೊರಹಾಕಿದೆ.
ಮಹಿಳೆಯರ ವಿರುದ್ಧದ ಕಿರುಕುಳ, ದೌರ್ಜನ್ಯ ಹಾಗೂ ಹಿಂಸಾಚಾರದ ಭೀತಿ ದಿನನಿತ್ಯದ ಬದುಕಿನ ಭಾಗವಾಗಿದೆ ಎಂಬ ಆತಂಕ ಜನಮಾನಸದಲ್ಲಿದೆ. ಆದರೆ, ಇಂತಹ ಅಪರಾಧ ಪ್ರಕರಣಗಳ ಆರೋಪ ಎದುರಿಸುತ್ತಿರುವ ನಾಯಕರೇ ಶಾಸನಸಭೆಗಳಲ್ಲಿ ಜನಪ್ರತಿನಿಧಿಗಳಾಗಿ ಕುಳಿತಾಗ ಪರಿಸ್ಥಿತಿ ಏನಾಗಬಹುದು ಎನ್ನುವ ಕಠಿಣ ಪ್ರಶ್ನೆಯನ್ನು ಎಡಿಆರ್ ವರದಿ ಎತ್ತಿದೆ. ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯ ವಿಧಾನಸಭೆಗಳ ನಾಯಕರ ಅಫಿಡವಿಟ್ ಪರಿಶೀಲಿಸಿ ಸಿದ್ಧಪಡಿಸಲಾದ ಈ ವರದಿಯ ಪ್ರಕಾರ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಹೊಂದಿರುವ ಹಾಲಿ ಸಂಸದರು ಮತ್ತು ಶಾಸಕರ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ 6ನೇ ಸ್ಥಾನದಲ್ಲಿದೆ.
ವರದಿಯ ಪ್ರಕಾರ ಕರ್ನಾಟಕದ ಈ 7 ಪ್ರತಿನಿಧಿಗಳೂ ಸಹ ಹಾಲಿ ಶಾಸಕರಾಗಿದ್ದಾರೆ (MLAs). ಅದೃಷ್ಟವಶಾತ್ ಕರ್ನಾಟಕದ ಹಾಲಿ ಲೋಕಸಭೆ ಅಥವಾ ರಾಜ್ಯಸಭೆಯ ಯಾವುದೇ ಸಂಸದರು (MPs) ಇಂತಹ ಪ್ರಕರಣಗಳನ್ನು ಹೊಂದಿಲ್ಲ. ದೇಶದಲ್ಲೇ ಅತ್ಯಂತ ಹೆಚ್ಚು ಅಂದರೆ ಬರೋಬ್ಬರಿ 69 ಇಂತಹ ಜನಪ್ರತಿನಿಧಿಗಳನ್ನು ಹೊಂದುವ ಮೂಲಕ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಆಂಧ್ರಪ್ರದೇಶ (22) ಎರಡನೇ ಸ್ಥಾನ, ಒಡಿಶಾ (17) ಮೂರನೇ ಸ್ಥಾನ, ಮಹಾರಾಷ್ಟ್ರ (11) ನಾಲ್ಕನೇ ಸ್ಥಾನ ಹಾಗೂ ಬಿಹಾರ (10) ಐದನೇ ಸ್ಥಾನದಲ್ಲಿದೆ. ಕರ್ನಾಟಕದ 7 ಶಾಸಕರ ಸಂಖ್ಯೆಯು ಜಾರ್ಖಂಡ್ (6), ಕೇರಳ (5), ಮಧ್ಯಪ್ರದೇಶ (5), ರಾಜಸ್ಥಾನ (5) ಹಾಗೂ ತೆಲಂಗಾಣ (5) ರಾಜ್ಯಗಳಿಗಿಂತ ಹೆಚ್ಚಾಗಿದೆ ಎಂಬುದು ಗಮನಾರ್ಹ.
ರಾಷ್ಟ್ರಮಟ್ಟದ ಲೆಕ್ಕಾಚಾರವನ್ನು ಗಮನಿಸುವುದಾದರೆ, ದೇಶಾದ್ಯಂತ ಒಟ್ಟು 187 ಹಾಲಿ ಸಂಸದರು ಮತ್ತು ಶಾಸಕರು ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇದರಲ್ಲಿ 168 ಶಾಸಕರು, 15 ಲೋಕಸಭಾ ಸಂಸದರು ಹಾಗೂ 4 ರಾಜ್ಯಸಭಾ ಸಂಸದರಿದ್ದಾರೆ. ಇದಕ್ಕಿಂತಲೂ ಭೀಕರ ಸತ್ಯವೆಂದರೆ, ದೇಶಾದ್ಯಂತ ಒಟ್ಟು 14 ಹಾಲಿ ಸಂಸದರು ಮತ್ತು ಶಾಸಕರು ತಮ್ಮ ವಿರುದ್ಧ ಅತ್ಯಾಚಾರ ಪ್ರಕರಣಗಳು ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಇಂತಹ ನಾಯಕರನ್ನು ಹೊಂದಿರುವ ದೇಶದ 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಒಂದಾಗಿದ್ದು, ಕರ್ನಾಟಕದ ಒಬ್ಬ ಹಾಲಿ ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಗರಿಷ್ಠ 3 ಹಾಗೂ ಮಧ್ಯಪ್ರದೇಶದಲ್ಲಿ 2 ನಾಯಕರ ವಿರುದ್ಧ ಅತ್ಯಾಚಾರ ಕೇಸ್ಗಳಿವೆ.
ನ್ಯಾಯಾಲಯಗಳು ದೋಷಾರೋಪಣೆ (Charges framed) ಪಟ್ಟಿ ಸಲ್ಲಿಕೆಯಾಗಿರುವ ಪ್ರಕರಣಗಳಲ್ಲೂ ರಾಜಕೀಯ ಪಕ್ಷಗಳು ಇಂತಹ ನಾಯಕರಿಗೆ ಟಿಕೆಟ್ ನೀಡುತ್ತಿರುವುದು ರಾಜಕೀಯ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಗಂಭೀರ ಸೋಲನ್ನು ತೋರಿಸುತ್ತದೆ. ಪ್ರಭಾವಿ ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ತನಿಖೆ ಹಾಗೂ ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತು ಸಂತ್ರಸ್ತರು ಹಾಗೂ ಅವರ ಕುಟುಂಬದವರನ್ನು ಬೆದರಿಸುವ ಸಾಧ್ಯತೆಗಳಿರುತ್ತವೆ ಎಂದು ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (National Election Watch) ಕಳವಳ ವ್ಯಕ್ತಪಡಿಸಿವೆ.
ರಾಜಕೀಯ ಶುದ್ಧೀಕರಣಕ್ಕಾಗಿ ಎಡಿಆರ್ ಪ್ರಮುಖ ಶಿಫಾರಸುಗಳನ್ನು ಮುಂದಿಟ್ಟಿದೆ. ಗಂಭೀರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸದಂತೆ ಬ್ರೇಕ್ ಹಾಕುವುದು, ಅತ್ಯಾಚಾರದಂತಹ ಭೀಕರ ಅಪರಾಧಗಳಲ್ಲಿ ದೋಷಿ ಎಂದು ಸಾಬೀತಾದವರನ್ನು ಚುನಾವಣೆಯಿಂದ ಖಾಯಂ ಆಗಿ ಅನರ್ಹಗೊಳಿಸುವುದು, ಮಹಿಳೆಯರ ವಿರುದ್ಧ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಶಾಸಕರನ್ನು ಸಚಿವ ಸಂಪುಟದಿಂದ ದೂರವಿಡುವುದು, ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಹಾಗೂ ಅವರನ್ನು ಆಯ್ಕೆ ಮಾಡಲು ಇರುವ ಸೂಕ್ತ ಕಾರಣಗಳನ್ನು ಸಾರ್ವಜನಿಕವಾಗಿ ಪ್ರಕಟಿಸದ ಪಕ್ಷಗಳ ವಿರುದ್ಧ ಕಟ್ಟುನಿಟ್ಟಿನ ದಂಡ ವಿಧಿಸುವುದು, ನ್ಯಾಯಾಲಯದ ಉಸ್ತುವಾರಿಯಲ್ಲಿ ಕಾಲಮಿತಿಯ ಒಳಗೆ ವಿಚಾರಣೆ ಪೂರ್ಣಗೊಳಿಸುವುದು ಹಾಗೂ ಮತದಾರರು ಮತ ಚಲಾಯಿಸುವ ಮುನ್ನ ಅಭ್ಯರ್ಥಿಯ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸುವುದನ್ನು ಶಿಫಾರಸು ಮಾಡಲಾಗಿದೆ.
ಅಪರಾಧ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳು ಟಿಕೆಟ್ ನೀಡುವುದನ್ನು ತಡೆಯಲು ಮತ್ತು ರಾಜಕೀಯ ವಲಯದಲ್ಲಿ ಜವಾಬ್ದಾರಿ ಹೆಚ್ಚಿಸಲು ಈ ವರದಿ ಬಲವಾದ ತಳಹದಿ ಒದಗಿಸಿದೆ ಎಂದು ಸಾಮಾಜಿಕ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.