image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೃಷಿ ಮೇಳದ ಯಶಸ್ಸಿಗೆ ಜನರೇ ಸಾಕ್ಷಿ: ಸಚಿವ ಮಧು ಬಂಗಾರಪ್ಪ

ಕೃಷಿ ಮೇಳದ ಯಶಸ್ಸಿಗೆ ಜನರೇ ಸಾಕ್ಷಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ : ಶಿವಮೊಗ್ಗದ ನವುಲೆ ಕೃಷಿ ಕಾಲೇಜು ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿರುವ ಕೃಷಿ ಮತ್ತು ತೋಟಗಾರಿಕೆ ಮೇಳ-2026ರಲ್ಲಿ ಲಕ್ಷಾಂತರ ಜನರು ಭಾಗವಹಿಸಿರುವುದು ಈ ಕಾರ್ಯಕ್ರಮದ ಬೃಹತ್ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಮೇಳದಲ್ಲಿ ಉದ್ಘಾಟನೆ, ರೈತರ ಯಶೋಗಾಥೆ ಮತ್ತು ಡಿಜಿಟಲ್ ಕೃಷಿ ಆಪ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ರೈತರು ಬರ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿಗಳ ಮಾಹಿತಿಯನ್ನು ಪಡೆದು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಬೃಹತ್ ಮೇಳದಲ್ಲಿ 600ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಸುಮಾರು 5 ರಿಂದ 6 ಲಕ್ಷ ಜನ ಭೇಟಿ ನೀಡುತ್ತಿದ್ದಾರೆ. 1990ರಲ್ಲಿ ಎಸ್. ಬಂಗಾರಪ್ಪನವರು ಸ್ಥಾಪಿಸಿದ ಈ ವಿಶ್ವವಿದ್ಯಾಲಯವು ರಾಜ್ಯದ ಮೂರನೇ ದೊಡ್ಡ ಕೃಷಿ ವಿವಿಯಾಗಿದೆ. ಹಾಗೆಯೇ, ಕಾಗೋಡು ತಿಮ್ಮಪ್ಪನವರ ಕೊಡುಗೆಯನ್ನು ಸ್ಮರಿಸಿದ ಸಚಿವರು, ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಇದೇ ವೇಳೆ ಉಚಿತ ವಿದ್ಯುತ್ ಯೋಜನೆಗಾಗಿ ಸರ್ಕಾರ ರೂ. 30,000 ಕೋಟಿ ಭರಿಸುತ್ತಿರುವುದಾಗಿ ತಿಳಿಸಿದ ಅವರು, ನಗರದ ವಿದ್ಯಾರ್ಥಿಗಳಿಗೆ ಗ್ರಾಮೀಣ ಬದುಕಿನ ಅನುಭವ ನೀಡಲು 'ಗ್ರಾಮಾನುಭವ' ಯೋಜನೆಯನ್ನು ಕನ್ನಡ ರಾಜ್ಯೋತ್ಸವದಂದು ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಚಿವ ಕೆ.ಎಸ್. ಬಸವಂತಪ್ಪ ಮಾತನಾಡಿ, ಕೃಷಿಯನ್ನು ಉದ್ಯಮವನ್ನಾಗಿ ಪರಿವರ್ತಿಸಲು ಮತ್ತು ಬರವ ಎದುರಿಸಲು ಕಡಿಮೆ ನೀರು ಬಳಸುವ ಪರ್ಯಾಯ ತಳಿಗಳ ಪ್ರಚಾರ ಅಗತ್ಯವಿದೆ ಎಂದರು. ಮೇಳದಲ್ಲಿ ಮಹಿಳೆಯರು ಮತ್ತು ಯುವಕರ ಹೆಚ್ಚಿನ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಅವರು, ಯುವಕರು ನಗರಗಳಲ್ಲಿ ಕಡಿಮೆ ವೇತನಕ್ಕೆ ಕೆಲಸ ಮಾಡುವ ಬದಲು ಸ್ವಂತ ಜಮೀನಿನಲ್ಲಿ ಆಧುನಿಕ ಕೃಷಿ ನಡೆಸಿ ಕೃಷಿ ಉದ್ಯಮಿಗಳಾಗಬೇಕು ಎಂದು ಸಲಹೆ ನೀಡಿದರು. ಅಲ್ಲದೆ, ಸಾವಯವ ಕೃಷಿ ಹಾಗೂ ಮೀನುಗಾರಿಕೆ ಇಲಾಖೆಯಿಂದ ಸಂಯೋಜಿತ ಕೃಷಿಗೆ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ಎಂ.ವಿ. ಧನಂಜಯ, ಕುಲಸಚಿವ ಡಾ. ಶಾಮರಾವ ಜಹಾಗೀರದಾರ ಹಾಗೂ ವಿವಿಧ ಜನಪ್ರತಿನಿಧಿಗಳು ಮತ್ತು ಪ್ರಗತಿಪರ ರೈತರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ