image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಯಶಸ್ವಿ ಲೀಡ್‌ಲೆಸ್ ಪೇಸ್‌ಮೇಕರ್ ಅಳವಡಿಕೆ

ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಯಶಸ್ವಿ ಲೀಡ್‌ಲೆಸ್ ಪೇಸ್‌ಮೇಕರ್ ಅಳವಡಿಕೆ

ಶಿವಮೊಗ್ಗ : ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಶ್ರೀವತ್ಸ ನಾಡಿಗ್ ಅವರು ಮಧ್ಯ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಬಾರಿಗೆ 'ಲೀಡ್‌ಲೆಸ್ ಪೇಸ್‌ಮೇಕರ್' (ತಂತಿ ರಹಿತ ಪೇಸ್‌ಮೇಕರ್) ಅಳವಡಿಸುವ ಮೂಲಕ ೭೫ ವರ್ಷದ ವಯೋವೃದ್ಧ ಮಹಿಳೆಗೆ ಮರುಜೀವ ನೀಡಿದ್ದಾರೆ.

ತೀವ್ರ ಹೊಟ್ಟೆನೋವು ಹಾಗೂ ರಕ್ತದೊತ್ತಡ ಕುಸಿತದ (ಶಾಕ್) ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಮಹಿಳೆಯನ್ನು ತಪಾಸಣೆಗೆ ಒಳಪಡಿಸಿದಾಗ ಕರುಳಿಗೆ ರಕ್ತಸಂಚಾರ ಸ್ಥಗಿತಗೊಂಡು ಕೊಳೆಯುವ ಗಂಭೀರ ಸ್ಥಿತಿಯಾದ 'ಮೆಸೆಂಟರಿಕ್ ಇನ್‌ಫಾರ್ಕ್ಷನ್' ಇರುವುದು ಪತ್ತೆಯಾಯಿತು. ತಕ್ಷಣವೇ ಡಾ. ಸತೀಶ್ ಕುಮಾರ್ ನೇತೃತ್ವದ ವೈದ್ಯರ ತಂಡ ಸಿಟಿ ಸ್ಕ್ಯಾನ್ ಮೂಲಕ ಕರುಳಿನ ಹಾನಿಗೊಂಡ ಭಾಗವನ್ನು (ಗ್ಯಾಂಗ್ರೀನ್) ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿ ತೆಗೆದುಹಾಕಿತು.

ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ 'ಆಟ್ರಿಯಲ್ ಫೈಬ್ರಿಲೇಶನ್' (ಹೃದಯ ಬಡಿತದ ಅಸಮತೋಲನ) ಹಾಗೂ 5 ಸೆಕೆಂಡುಗಳವರೆಗೆ ಹೃದಯ ಬಡಿತ ನಿಂತುಹೋಗುವ ಅಪಾಯಕಾರಿ ಲಕ್ಷಣಗಳು ಕಂಡುಬಂದವು. ಹೋಲ್ಟರ್ ಪರೀಕ್ಷೆಯಲ್ಲಿ ಇದು ವೇಗದ ಮತ್ತು ನಿಧಾನ ಹೃದಯಬಡಿತ ಎರಡನ್ನೂ ಒಳಗೊಂಡ ಗಂಭೀರ ಸಮಸ್ಯೆ ಎಂದು ದೃಢಪಟ್ಟಿತು. ಈ ಗುಪ್ತ ಹೃದಯದ ತೊಂದರೆಯೇ ಕರುಳಿನ ರಕ್ತಸಂಚಾರ ಸ್ಥಗಿತಗೊಳ್ಳಲು ಮೂಲ ಕಾರಣವಾಗಿತ್ತು ಎಂದು ವೈದ್ಯರು ಗುರುತಿಸಿದರು.

ರೋಗಿಗೆ ಈಗಾಗಲೇ ಸೋಂಕು ಹಾಗೂ ಗಾಯಗಳಿದ್ದ ಕಾರಣ, ಸಾಂಪ್ರದಾಯಿಕ ಪೇಸ್‌ಮೇಕರ್ ಅಳವಡಿಸುವುದು ಅಪಾಯಕಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸೋಂಕಿನ ಅಪಾಯ ಅತ್ಯಂತ ಕಡಿಮೆ ಇರುವ ಮತ್ತು ಸುಲಭವಾಗಿ ಅಳವಡಿಸಬಹುದಾದ 'ಲೀಡ್‌ಲೆಸ್ ಪೇಸ್‌ಮೇಕರ್' ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಂತೆ ಎದೆಯ ಚರ್ಮದಡಿ ಬ್ಯಾಟರಿ ಘಟಕ ಮತ್ತು ತಂತಿಗಳನ್ನು ಅಳವಡಿಸದೆ, ಇದು ಗುಳಿಗೆಯ ಗಾತ್ರದ ಸಾಧನವಾಗಿದ್ದು ತೊಡೆಸಂದಿಯ ರಕ್ತನಾಳದ ಮೂಲಕ ನೇರವಾಗಿ ಹೃದಯದೊಳಗೆ ಯಾವುದೇ ತಂತಿಯಿಲ್ಲದೆ ಜೋಡಿಸಲ್ಪಡುತ್ತದೆ. ಇದರಿಂದ ಎದೆಯಲ್ಲಿ ಯಾವುದೇ ಕಟ್ ಮಾಡುವುದು ತಪ್ಪುತ್ತದೆ, ಸೋಂಕಿನ ಅಪಾಯ ತಗ್ಗುತ್ತದೆ, ತಂತಿ ಸ್ಥಳಾಂತರಗೊಳ್ಳುವ ಸಮಸ್ಯೆ ಇರುವುದಿಲ್ಲ ಹಾಗೂ ರೋಗಿ ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಡಾ. ಶ್ರೀವತ್ಸ ನಾಡಿಗ್ ಅವರ ನೇತೃತ್ವದಲ್ಲಿ ಜರುಗಿದ ಈ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಿದ್ದು, ಹಲವು ವಾರಗಳ ಚಿಕಿತ್ಸೆ ಮತ್ತು ಆರೈಕೆಯ ನಂತರ ರೋಗಿ ಸಂಪೂರ್ಣವಾಗಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಮಧ್ಯ ಕರ್ನಾಟಕದಲ್ಲಿಯೇ ಇದು ಪ್ರಥಮ ಯಶಸ್ವಿ ಲೀಡ್‌ಲೆಸ್ ಪೇಸ್‌ಮೇಕರ್ ಚಿಕಿತ್ಸೆಯಾಗಿದ್ದು, ಸ್ಥಳೀಯ ಜನರಿಗೆ ಇಂತಹ ಸುಧಾರಿತ ವೈದ್ಯಕೀಯ ಸೇವೆಗಳು ಶಿವಮೊಗ್ಗದಲ್ಲೇ ಲಭ್ಯವಿರುವುದನ್ನು ಇದು ಸಾಬೀತುಪಡಿಸಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ್ ಶರ್ಮಾ ಹಾಗೂ ಮಾರುಕಟ್ಟೆಯ ಹಿರಿಯ ವ್ಯವಸ್ಥಾಪಕ ಶ್ರೀ ಶೈಲೇಶ್ ಎಸ್. ಎನ್. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ