ಬೆಂಗಳೂರು: ರಾಜ್ಯ ಪೊಲೀಸ್ ಸೈಬರ್ ಕಮಾಂಡ್ ಘಟಕವು ಅಕ್ರಮ ಸಿಮ್ ಬಾಕ್ಸ್ ನೆಟ್‌ವರ್ಕ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ತಮಿಳುನಾಡಿನಲ್ಲಿ ಸಕ್ರಿಯವಾಗಿದ್ದ ಮತ್ತೂ ಎರಡು ಅಂತಾರಾಜ್ಯ ಜಾಲಗಳನ್ನು ಪತ್ತೆ ಮಾಡಿದೆ.
ಇತ್ತೀಚೆಗೆ ವೈಟ್‌ಫೀಲ್ಡ್ ವಿಭಾಗದ ಪಟ್ಟಂದೂರು ಅಗ್ರಹಾರ ಹಾಗೂ ಕಾಡುಗೋಡಿ ಠಾಣೆ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ಗಳ ಮೇಲೆ ದಾಳಿ ನಡೆಸಿದ್ದ ಸೈಬರ್ ಕಮಾಂಡ್ ಸಿಬ್ಬಂದಿ, 10 ಸಿಮ್ ಬಾಕ್ಸ್ ಸಾಧನಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ವಶಪಡಿಸಿಕೊಂಡ ಡಿಜಿಟಲ್ ಸಾಕ್ಷ್ಯಗಳು, ದೂರಸಂಪರ್ಕ ದಾಖಲೆಗಳು ಹಾಗೂ ಉಪಕರಣಗಳ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ಈ ಜಾಲವು ತಮಿಳುನಾಡಿನ ತಿರುಚ್ಚಿ ಮತ್ತು ತಂಜಾವೂರು ಜಿಲ್ಲೆಗಳಿಗೂ ವಿಸ್ತರಿಸಿರುವುದು ಬೆಳಕಿಗೆ ಬಂದಿದೆ.
ಸಿಕ್ಕ ಸುಳಿವುಗಳ ಆಧಾರದ ಮೇಲೆ ದೂರಸಂಪರ್ಕ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, 10 ಇ-ಸಿಮ್ ಸೌಲಭ್ಯ ಹೊಂದಿದ್ದ ಸಿಮ್ ಬಾಕ್ಸ್ ಸಾಧನಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸೈಬರ್ ಕಮಾಂಡ್ ಮಹಾನಿರ್ದೇಶಕ ಡಾ. ಪ್ರಣಬ್ ಮೊಹಾಂತಿ, ಸಿಮ್ ಬಾಕ್ಸ್ ಹಾಗೂ ಫಾರ್ಮ್ ಸಾಧನಗಳ ಖರೀದಿ, ಇ-ಸಿಮ್ ಪ್ರೊಫೈಲ್‌ಗಳ ಬಳಕೆ ಮತ್ತು ಪ್ರಕರಣದ ಹಿಂದಿರುವ ವಿದೇಶಿ ಹ್ಯಾಂಡ್ಲರ್‌ಗಳು ಹಾಗೂ ಸ್ಥಳೀಯ ಸಹವರ್ತಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.