image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಕ್ಕರೆ ಬೆಲೆ ಏರಿಕೆಯಾಗುವವರೆಗೆ ಕಾಯಿರಿ: ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ಸಕ್ಕರೆ ಬೆಲೆ ಏರಿಕೆಯಾಗುವವರೆಗೆ ಕಾಯಿರಿ: ರೈತರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ಬೆಂಗಳೂರು : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ, ತಕ್ಷಣವೇ ಸಿಹಿ ಸುದ್ದಿ ನೀಡುವಂತೆ ಪಟ್ಟು ಹಿಡಿದ ರೈತರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಸರ್ಕಾರದ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಸರ್ಕಾರದ ಖಜಾನೆ ಖಾಲಿಯಾಗಿದೆ ಮತ್ತು ಹಣಕಾಸಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದರು. ಸಕ್ಕರೆ ಬೆಲೆ ಹೆಚ್ಚಾಗುವವರೆಗೆ ಅಥವಾ ಕೇಂದ್ರ ಸರ್ಕಾರದ ಸಮಿತಿ ನೀಡುವ ವರದಿ ಬರುವವರೆಗೆ ರೈತರು ತಾಳ್ಮೆಯಿಂದಿರಬೇಕು ಎಂದು ಮನವಿ ಮಾಡಿದರು.

ಮಧ್ಯಂತರ ಬೆಲೆ (SAP) ತಕ್ಷಣವೇ ಘೋಷಿಸಬೇಕೆಂದು ಒತ್ತಾಯಿಸಿದ ರೈತ ಮುಖಂಡರಿಗೆ ಉತ್ತರಿಸಿದ ಸಿಎಂ, ಕೇಂದ್ರದ ಸಮಿತಿ ಅಕ್ಟೋಬರ್ 29ರಂದು ಆಗಮಿಸಲಿದ್ದು, ಅವರ ವರದಿ ಬಂದ ಬಳಿಕ ಸಕ್ಕರೆಗೆ ಉತ್ತಮ ಬೆಲೆ ನಿಗದಿಯಾದರೆ ಸಮಸ್ಯೆ ಬಗೆಹರಿಯಲಿದೆ ಎಂದರು. ಸಕ್ಕರೆ ಕಾರ್ಖಾನೆ ಮಾಲೀಕರು ಎಂಎಸ್‌ಪಿ ನಿಗದಿಪಡಿಸಲು ಮತ್ತು ತೂಕದ ಯಂತ್ರ ಅಳವಡಿಸಲು ವಿನಂತಿಸಿದ್ದು, ಕಾರ್ಖಾನೆ ನಡೆಸುವುದು ಸವಾಲಾಗಿದೆ ಎಂದು ತಿಳಿಸಿದ್ದಾರೆ. ನೆರೆಯ ತೆಲಂಗಾಣ, ಆಂಧ್ರ ಸಿಎಂ ಜೊತೆ ಚರ್ಚಿಸಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳೊಂದಿಗೂ ಮಾತನಾಡಿ ಕೇಂದ್ರದ ವಿಶ್ವಾಸದೊಂದಿಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹಾಗೂ ಆರ್ಥಿಕ ಇಲಾಖೆಯ ಸಲಹೆ ಪಡೆದು ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಆದರೆ, ಮುಖ್ಯಮಂತ್ರಿಯವರ ಭರವಸೆಗೆ ಒಪ್ಪದ ರೈತ ಮುಖಂಡರು ಇಂದೇ ಎಸ್‌ಎಪಿ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತರು ಎದುರಿಸುತ್ತಿರುವ ಸವಾಲುಗಳನ್ನು ಉಲ್ಲೇಖಿಸಿ, ಬೆಳೆಗಳಿಗೆ ಶಾಶ್ವತ ಬೆಲೆ ನಿಗದಿ ವ್ಯವಸ್ಥೆ ರೂಪಿಸದಿದ್ದರೆ ರೈತರೇ ಬೆಲೆ ನಿಗದಿಪಡಿಸಿಕೊಳ್ಳಲಿದ್ದಾರೆ ಎಂದು ಎಚ್ಚರಿಸಿದರು. ರೈತರ ಮೇಲಿನ ಕೇಸ್‌ಗಳನ್ನು ವಾಪಸ್ ಪಡೆಯುವುದು, ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ರಕ್ಷಿಸುವುದು, ಸಾಲಮನ್ನಾ ಮಾಡುವುದು, ಮೈಕ್ರೋ ಫೈನಾನ್ಸ್ ಕಿರುಕುಳ ತಡೆಯುವುದು ಮತ್ತು ಮುಂಬರುವ ಭೀಕರ ಬರಗಾಲಕ್ಕೆ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

Category
ಕರಾವಳಿ ತರಂಗಿಣಿ