image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಂಪಿ ಸ್ಮಾರಕಗಳ ಸಂರಕ್ಷಣೆ: ಯುನೆಸ್ಕೊ ತಜ್ಞರ ತಂಡದಿಂದ ಪರಿಶೀಲನೆ

ಹಂಪಿ ಸ್ಮಾರಕಗಳ ಸಂರಕ್ಷಣೆ: ಯುನೆಸ್ಕೊ ತಜ್ಞರ ತಂಡದಿಂದ ಪರಿಶೀಲನೆ

ಹಂಪಿ : ವಿಶ್ವ ಪಾರಂಪರಿಕ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಲು ಯುನೆಸ್ಕೊ ವಿಶ್ವ ಪಾರಂಪರಿಕ ಕೇಂದ್ರದ ತಜ್ಞರ ತಂಡ ಶನಿವಾರ ಹಂಪಿಗೆ ಆಗಮಿಸಿದೆ. ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಂಡವು ಸಂರಕ್ಷಣಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡಿತು. ಕೀನ್ಯಾದ ಜಾರ್ಜ್ ಅಬುಂಗ್ ಹಾಗೂ ಜಪಾನ್‌ನ ಇಚಿಡಾ ಶಿಮೋಡಾ ನೇತೃತ್ವದ ತಂಡವು ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ಅಧಿಕಾರಿಗಳು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಪ್ರವಾಸೋದ್ಯಮ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿತು.

ಸಭೆಯಲ್ಲಿ ವಿವಿಧ ಇಲಾಖೆಗಳು ಸ್ಮಾರಕಗಳ ಸಂರಕ್ಷಣೆಗೆ ಕೈಗೊಂಡಿರುವ ಕಾರ್ಯಗಳ ಕುರಿತು ವಿವರಣೆ ನೀಡಿದವು. ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರದ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ತಂಡದ ಸದಸ್ಯರು, ಇಂತಹ ಮಾದರಿ ವ್ಯವಸ್ಥೆಯನ್ನು ಇತರ ಪಾರಂಪರಿಕ ತಾಣಗಳಲ್ಲೂ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಮಲಾಪುರದ ಇವಾಲ್ವ್‌ ಬ್ಯಾಕ್‌ ರೆಸಾರ್ಟ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನೀಡದೆ ಈ ಸಭೆ ನಡೆಸಲಾಗಿದ್ದು, ಜಿಲ್ಲಾಡಳಿತವೂ ಅಧಿಕೃತ ಮಾಹಿತಿ ಹಂಚಿಕೊಳ್ಳದ ಕಾರಣ ಸಭೆಯ ಆಂತರಿಕ ಚರ್ಚೆಯ ವಿವರಗಳು ಬಹಿರಂಗವಾಗಿಲ್ಲ. ತಂಡವು ಭಾನುವಾರ ಕಮಲಾಪುರದ ಎಎಸ್‌ಐ ಮ್ಯೂಸಿಯಂ, ಮಾಲ್ಯವಂತ ರಘುನಾಥ ದೇವಸ್ಥಾನ ಹಾಗೂ ವಿಜಯ ವಿಠ್ಠಲ ದೇವಸ್ಥಾನಗಳಿಗೆ ಭೇಟಿ ನೀಡಲಿದೆ. ಬಳಿಕ ಗಂಗಾವತಿ ತಾಲೂಕಿನ ಅಂಜನಾದ್ರಿ ಮತ್ತು ಆನೆಗೊಂದಿಯ ಗಗನ ಮಹಲ್‌ ವೀಕ್ಷಿಸಿ, ಸಂಜೆ 5:30ಕ್ಕೆ ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಹಿತಾಸಕ್ತಿದಾರರೊಂದಿಗೆ ಸಭೆ ನಡೆಸಲಿದೆ.

ಅಕ್ಟೋಬರ್ 26ರಂದು ವಿರೂಪಾಕ್ಷ ದೇವಸ್ಥಾನ, ಕೃಷ್ಣ ದೇವಸ್ಥಾನ ಹಾಗೂ ಕಮಲಮಹಲ್‌ ಪ್ರದೇಶಗಳಿಗೆ ಭೇಟಿ ನೀಡಲಿರುವ ತಜ್ಞರು, ಮಧ್ಯಾಹ್ನದ ನಂತರ ಇವಾಲ್ವ್​ ಬ್ಯಾಕ್‌ ರೆಸಾರ್ಟ್‌ನಲ್ಲಿ ಹಂಪಿ ಮಾಸ್ಟರ್‌ ಪ್ಲಾನ್‌ ಮತ್ತು ಸಮಗ್ರ ನಿರ್ವಹಣಾ ಯೋಜನೆಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಅಕ್ಟೋಬರ್ 27ರಂದು ಚರ್ಚೆ ಮುಂದುವರಿಸಿ ಮಧ್ಯಾಹ್ನ ಬೆಂಗಳೂರಿಗೆ ತೆರಳಲಿದ್ದು, ಅಕ್ಟೋಬರ್ 28ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಎಎಸ್‌ಐ ಹಾಗೂ ಯುನೆಸ್ಕೊ ಪ್ರತಿನಿಧಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ತಜ್ಞರ ತಂಡವು ಹಂಪಿಯ ಪಾರಂಪರಿಕ ಮೌಲ್ಯ ಹಾಗೂ ಸ್ಮಾರಕಗಳ ಸಂರಕ್ಷಣೆಯ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯುನೆಸ್ಕೊಗೆ ವರದಿ ಸಲ್ಲಿಸಲಿದೆ. ಈ ವರದಿಯ ಆಧಾರದ ಮೇಲೆಯೇ ಹಂಪಿ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಮುಂದುವರಿಯಲಿದೆಯೇ ಅಥವಾ ಅಪಾಯದಲ್ಲಿರುವ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಲಿದೆಯೇ ಎಂಬುದು ನಿರ್ಧಾರವಾಗಲಿದ್ದು, ಈ ಭೇಟಿಯು ಹಂಪಿಯ ಪಾರಂಪರಿಕ ಸ್ಥಾನಮಾನದ ದೃಷ್ಟಿಯಿಂದ ಅತ್ಯಂತ ಮಹತ್ವ ಪಡೆದುಕೊಂಡಿದೆ.

Category
ಕರಾವಳಿ ತರಂಗಿಣಿ