image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಪಿಂಚಣಿ ಕಡಿತಗೊಳಿಸುವ ಅಧಿಕಾರ ಸರ್ಕಾರಕ್ಕಿಲ್ಲ: ಮಹದೇವಯ್ಯ ಮಠಪತಿ

ಪಿಂಚಣಿ ಕಡಿತಗೊಳಿಸುವ ಅಧಿಕಾರ ಸರ್ಕಾರಕ್ಕಿಲ್ಲ: ಮಹದೇವಯ್ಯ ಮಠಪತಿ

ಮಳವಳ್ಳಿ : ಪಿಂಚಣಿಯು ಪ್ರತಿಯೊಬ್ಬ ನಿವೃತ್ತ ಸರ್ಕಾರಿ ನೌಕರನ ಹಕ್ಕಾಗಿದ್ದು, ಅದನ್ನು ಕಡಿತಗೊಳಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟದ ರಾಜ್ಯ ಅಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ರಾಜ್ಯ ಪಿಂಚಣಿದಾರರ ಒಕ್ಕೂಟದ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ಪಿಂಚಣಿದಾರರ ಸೌಕರ್ಯಗಳನ್ನು ಕಡಿಮೆ ಮಾಡಲು ಯತ್ನಿಸುತ್ತಿದ್ದು, ನಿವೃತ್ತ ನೌಕರರಿಗೆ ಹೆಚ್ಚಿನ ಸೌಲಭ್ಯಗಳನ್ನು ದೊರಕಿಸಿಕೊಡಲು ಒಕ್ಕೂಟದ ಹೋರಾಟ ನಿರಂತರವಾಗಿರುತ್ತದೆ ಎಂದರು. ಈ ಉದ್ದೇಶಕ್ಕಾಗಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಎಲ್ಲರನ್ನೂ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿದ್ದ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಸಾಂಸ್ಕೃತಿಕ ಸಂಚಾಲಕ ವಿಜಯಕುಮಾರ್ ಮಾತನಾಡಿ, ನೌಕರನು ತನ್ನ ಜೀವಿತಾವಧಿಯ ಪ್ರಮುಖ ಸಮಯವನ್ನು ಸರ್ಕಾರಿ ಸೇವೆಗೆ ಮೀಸಲಿಟ್ಟಿರುವುದಕ್ಕೆ ಪಡೆಯುವ ಸಂಭಾವನೆಯೇ ಪಿಂಚಣಿಯಾಗಿದೆ. ಹೀಗಾಗಿ ಪಿಂಚಣಿಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಪಡೆಯುವುದು ನೌಕರರ ಹಕ್ಕಾಗಿದೆ ಎಂದು ಪ್ರತಿಪಾದಿಸಿದರು.

ಸಭೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಒಕ್ಕೂಟದ ಅಧ್ಯಕ್ಷ ಎಸ್. ಜಯ ಕುಮಾರ್ ಮಾತನಾಡಿದರು. ಪಿಂಚಣಿದಾರರ ಒಕ್ಕೂಟದ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಎಂ. ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಒಕ್ಕೂಟದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುನೀಲ್, ಜಿ. ವೆಂಕಟರಂಗಯ್ಯ, ನಂಜಶೆಟ್ಟಿ, ಶೈಲಜಾ, ಮೀರಾ, ಲಿಂಗೇಗೌಡ, ವಾಸುದೇವಮೂರ್ತಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ