image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಮಾನ ಆಚರಣಾ ಸಂಹಿತೆ, ಸಂಸ್ಕಾರ ಶಿಕ್ಷಣ ಇಂದಿನ ಕಾಲದ ಅನಿವಾರ್ಯತೆ: ಸಿ.ಟಿ. ರವಿ

ಸಮಾನ ಆಚರಣಾ ಸಂಹಿತೆ, ಸಂಸ್ಕಾರ ಶಿಕ್ಷಣ ಇಂದಿನ ಕಾಲದ ಅನಿವಾರ್ಯತೆ: ಸಿ.ಟಿ. ರವಿ

ಶೃಂಗೇರಿ: ಭಾರತೀಯ ಮೂಲದ ಧಾರ್ಮಿಕ ಪರಂಪರೆಗಳಲ್ಲಿರುವ ಸಮಾನ ಮೌಲ್ಯಗಳನ್ನು ಆಧರಿಸಿ ಏಕರೂಪ ಆಚರಣೆ ಸಂಹಿತೆ ಹಾಗೂ ಸಾಮಾನ್ಯ ಸಂಸ್ಕಾರ ಶಿಕ್ಷಣವನ್ನು ರೂಪಿಸುವುದು ಇಂದಿನ ಕಾಲದ ಅನಿವಾರ್ಯತೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ. ಟಿ ಅಭಿಪ್ರಾಯಪಟ್ಟಿದ್ದಾರೆ. ಶೃಂಗೇರಿಯ ಸಂಸ್ಕೃತ ವಿಶ್ವವಿದ್ಯಾಲಯದ ಶ್ರೀ ಭಾರತಿ ತೀರ್ಥ ಶಾಸ್ತ್ರಸಮುತ್ಕರ್ಷ ಕೇಂದ್ರದಲ್ಲಿ ಭಾರತೀಯ ಸಂತ ಮಹಾ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ಏಕರೂಪ ಆಚರಣಾ ಸಂಹಿತೆ (URC) ಮತ್ತು ಏಕರೂಪ ಸಾಮಾನ್ಯ ಸಂಸ್ಕಾರ ಶಿಕ್ಷಣ (UGSE) ಮಹೋನ್ನತ ಕ್ರಿಯಾ ಯೋಜನೆಗಳ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಿಂದೂ, ಜೈನ, ಬೌದ್ಧ ಮತ್ತು ಸಿಖ್ ಧಾರ್ಮಿಕ ಪರಂಪರೆಗಳಲ್ಲಿರುವ ಸಮಾನ ಅಂಶಗಳನ್ನು ಆಧರಿಸಿ ನೈತಿಕತೆ, ತತ್ವಜ್ಞಾನ, ಧಾರ್ಮಿಕ ಮೌಲ್ಯಗಳು ಹಾಗೂ ಸಮಷ್ಟಿಯ ಹಿತವನ್ನು ಒಳಗೊಂಡ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವ ಪ್ರಯತ್ನ ಇದಾಗಿದೆ. ಇದು ಭಾರತದ ಸಂಸ್ಕೃತಿಯ ಉಳಿವಿಗೆ ಮಾತ್ರವಲ್ಲದೆ, ಜಾಗತಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ಹೇಳಿದರು. ಆದಿ ಶಂಕರಾಚಾರ್ಯರು ಧಾರ್ಮಿಕ ಪುನರುತ್ಥಾನಕ್ಕೆ ಶ್ರಮಿಸಿದ ಮಾದರಿಯಲ್ಲೇ ಇಂದಿನ ಅಗತ್ಯಗಳಿಗೆ ಅನುಗುಣವಾಗಿ ಧಾರ್ಮಿಕ ಆಚರಣೆ ಮತ್ತು ಸಂಸ್ಕಾರ ಶಿಕ್ಷಣವನ್ನು ರೂಪಿಸಬೇಕಿದೆ. ಸಮಾಜದಲ್ಲಿರುವ ವೈವಿಧ್ಯತೆಯನ್ನು ವಿಭಜನೆಗೆ ಬಳಸದೆ, ಅದರಲ್ಲಿರುವ ಏಕತೆಯ ಅಂಶಗಳನ್ನು ಮುನ್ನೆಲೆಗೆ ತಂದು ಸಾಮರಸ್ಯವನ್ನು ಪುನಃ ಸ್ಥಾಪಿಸುವುದು ಈ ಪ್ರಯತ್ನದ ಮುಖ್ಯ ಉದ್ದೇಶವಾಗಿದೆ ಎಂದರು.

ಸನಾತನ ಧರ್ಮದ ಮೂಲ ತತ್ವಗಳು ಎಂದಿಗೂ ಅಸ್ಪೃಶ್ಯತೆಯನ್ನು ಪ್ರತಿಪಾದಿಸುವುದಿಲ್ಲ ಎಂದು ತಿಳಿಸಿದ ರವಿ ಅವರು, ಭಾರತೀಯ ಮೂಲದ ವಿವಿಧ ಧಾರ್ಮಿಕ ಪರಂಪರೆಗಳ ಸಮಾನ ಮೌಲ್ಯಗಳನ್ನು ಒಗೂಡಿಸುವ ಈ ಪ್ರಯತ್ನ ಐತಿಹಾಸಿಕವಾದುದು ಎಂದು ಬಣ್ಣಿಸಿದರು. ವಿವಿಧ ಪರಂಪರೆಗಳ ಮಠಾಧಿಪತಿಗಳು ಹಾಗೂ ಧಾರ್ಮಿಕ ಮುಖಂಡರನ್ನು ಒಂದೇ ವೇದಿಕೆಗೆ ತಂದ ಈ ಅಭಿಯಾನದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅವರು ಅಭಿನಂದನೆ ಸಲ್ಲಿಸಿದರು. ಈ ಸಮಾರಂಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು, ಶ್ರೀ ಶ್ರೀ ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಮಹಾಸ್ವಾಮಿಗಳು, ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ