ಬೆಂಗಳೂರು : ಸಿದ್ದರಾಮಯ್ಯ ಸ್ಟಿಂಗ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆಯಲ್ಲಿ ಮಹತ್ವದ ಹೊಸ ಮಾಹಿತಿಗಳು ಬೆಳಕಿಗೆ ಬಂದಿದ್ದು, 'ಕರ್ನಾಟಕ ಹನಿಟ್ರ್ಯಾಪ್' ಯೂಟ್ಯೂಬ್ ಖಾತೆ ಮೂಲಕ ವಿಡಿಯೋ ಅಪ್ಲೋಡ್ ಮಾಡಿದ್ದ ದೆಹಲಿ ಮೂಲದ ಆರೋಪಿ ರಿತೇಶ್ ಪಾಂಡೆ ದೆಹಲಿಯ ಕರೋಲ್ ಬಾಗ್ ಮಾರುಕಟ್ಟೆಯಲ್ಲಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಕೃತ್ಯ ಎಸಗಿರುವುದು ತನಿಖೆಯಿಂದ ತಿಳಿದುಬಂದಿದೆ. ಸಿಮ್ ಕಾರ್ಡ್ ಬಳಸದೆ ವೈ-ಫೈ ಮೂಲಕ ಇಂಟರ್ನೆಟ್ ಸಂಪರ್ಕಿಸಬಹುದಾದ ಮೊಬೈಲಿಗಾಗಿ ಹುಡುಕಾಟ ನಡೆಸಿದ್ದ ಈತ, 15 ಸಾವಿರ ರೂಪಾಯಿ ನೀಡಿ ಮೊಬೈಲ್ ಖರೀದಿಸಿ, ತನಗೆ ತಲುಪಿದ್ದ ಪೆನ್ಡ್ರೈವ್ನಲ್ಲಿದ್ದ ವಿಡಿಯೋವನ್ನು ಒಟಿಜಿ ಕನೆಕ್ಟರ್ ಮೂಲಕ ವೀಕ್ಷಿಸಿ ಅಪ್ಲೋಡ್ ಮಾಡಿದ್ದ. ಈ ಕುರಿತು ಅಂಗಡಿಯ ಬಿಲ್ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸಿದ್ದು, ವಿಡಿಯೋ ಅಪ್ಲೋಡ್ ಮಾಡಲು ರಿತೇಶ್ಗೆ ಸೂಚನೆ ನೀಡಿದವರು ಯಾರು, ಪೆನ್ಡ್ರೈವ್ ತಲುಪಿಸಿದವರು ಯಾರು ಹಾಗೂ 50 ಸಾವಿರ ರೂಪಾಯಿ ಹಣಕಾಸಿನ ವ್ಯವಹಾರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಬಂಧನದ ಬಳಿಕ ರಿತೇಶ್ ಪಾಂಡೆಯನ್ನು 66ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಾದ ಆಲಿಸಿದ ನ್ಯಾಯಾಲಯವು ಸಿಸಿಬಿ ತನಿಖೆಗೆ ಸಹಕರಿಸಬೇಕು, ನಗರ ಬಿಟ್ಟು ತೆರಳುವಾಗ ಮಾಹಿತಿ ನೀಡಬೇಕು ಹಾಗೂ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಸ್ಟಿಂಗ್ ವಿಡಿಯೋದಲ್ಲಿರುವ ಮಹಿಳೆಯನ್ನು ವಿಚಾರಣೆ ನಡೆಸಿರುವ ಸಿಸಿಬಿ ಪೊಲೀಸರು ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಕೃತ್ಯದ ಹಿಂದಿನ ಅಸಲಿ ಸೂತ್ರಧಾರರ ಪತ್ತೆಗಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ.