ಬೆಂಗಳೂರು : ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರಕ್ಕಾಗಿ ದೇಶದ ವಿವಿಧ ಭಾಗಗಳ ಜನರನ್ನು ತನ್ನತ್ತ ಆಕರ್ಷಿಸುತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಷೆಯ ವಿಚಾರ ಮತ್ತೊಂದು ಹೊಸ ಸ್ವರೂಪ ಪಡೆದುಕೊಂಡಿದೆ. ಕನ್ನಡ ಮತ್ತು ಕನ್ನಡಿಗರ ವಿಚಾರವಾಗಿ ಆಗಾಗ್ಗೆ ಸೃಷ್ಟಿಯಾಗುತ್ತಿರುವ ವಿವಾದಗಳಿಗೆ ಶಾಶ್ವತ ಪರಿಹಾರವೆಂಬಂತೆ, ಬೆಂಗಳೂರನ್ನು ದೆಹಲಿಯ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕು ಎಂಬ ಅಸಮರ್ಪಕ ಬೇಡಿಕೆ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ನಲ್ಲಿ ಮುನ್ನೆಲೆಗೆ ಬಂದಿದ್ದು, ಇದು ರಾಜ್ಯದಲ್ಲಿ ವ್ಯಾಪಕ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಐಟಿ-ಬಿಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಊಹಿಸಲಾಗದ ಬೆಳೆವಣಿಗೆಯಿಂದಾಗಿ ಬೆಂಗಳೂರು ದೇಶದ ಪ್ರಮುಖ ಉದ್ಯೋಗ ಕೇಂದ್ರವಾಗಿ ಬೆಳೆದಿದೆ. ಈ ಕಾರಣದಿಂದಲೇ ದೇಶದ ಮೂಲೆಮೂಲೆಗಳಿಂದ ಲಕ್ಷಾಂತರ ಜನರು ಇಲ್ಲಿಗೆ ವಲಸೆ ಬಂದು ನೆಲೆಸಿದ್ದಾರೆ. ಬಹುಭಾಷಿಕರು ಒಂದೆಡೆ ಸೇರಿರುವ ಈ ಮಹಾನಗರದಲ್ಲಿ ಭಾಷಾ ಬಳಕೆ, ಸ್ಥಳೀಯ ಸಂಸ್ಕೃತಿ ಮತ್ತು ಪರಸ್ಪರ ಗೌರವದ ವಿಚಾರಗಳು ಆಗಾಗ್ಗೆ ಸಂಘರ್ಷಕ್ಕೆ ಕಾರಣವಾಗುತ್ತಿವೆ. ಸ್ಥಳೀಯ ಭಾಷೆಯಾದ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರ ಪ್ರಬಲ ಆಗ್ರಹದ ನಡುವೆಯೇ, ಭಾಷೆಯ ವಿಚಾರದಲ್ಲಿ ಯಾರ ಮೇಲೂ ಒತ್ತಡ ಹೇರಬಾರದು ಎಂಬ ವಿರೋಧಾಭಾಸದ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ಇಂತಹ ಸೂಕ್ಷ್ಮ ಸನ್ನಿವೇಶದ ನಡುವೆ, ಭಾಷಾ ಗಲಾಟೆಗಳಿಗೆ ಕಡಿವಾಣ ಹಾಕಲು ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಬೇಕು ಎಂಬ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ. "ಉಂಡ ಮನೆಗೆ ಕನ್ನ ಹಾಕಿದರು" ಎಂಬಂತೆ ಅನ್ನ ನೀಡಿದ ಬೆಂಗಳೂರನ್ನೇ ಕೇಂದ್ರಾಡಳಿತ ಪ್ರದೇಶ ಮಾಡಿ ಎಂದು ವಲಸಿಗರು ಹುಚ್ಚುತನದ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಕನ್ನಡಿಗರು ಮತ್ತು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಕಿಡಿಕಾರಿದ್ದಾರೆ. ಬೆಂಗಳೂರಿನ ಭಾಷೆ, ಸಂಸ್ಕೃತಿ, ಇತಿಹಾಸ ಮತ್ತು ಕನ್ನಡಿಗರ ಅಸ್ಮಿತೆಯನ್ನು ಸಂಪೂರ್ಣವಾಗಿ ಕಡೆಗಣಿಸಿ ಇಂತಹ ಬೇಡಿಕೆಗಳನ್ನು ಮುಂದಿಡುವುದು ಯಾವುದೇ ಕಾರಣಕ್ಕೂ ಕ್ಷಮಾರ್ಹವಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನ ಇಂದಿನ ಸಮಗ್ರ ಅಭಿವೃದ್ಧಿಯಲ್ಲಿ ಕನ್ನಡಿಗರ ತ್ಯಾಗ, ಕೊಡುಗೆ ಹಾಗೂ ಕನ್ನಡ ಭಾಷೆಯ ಮಹತ್ವವನ್ನು ಯಾರೂ ಮರೆಯಬಾರದು ಎಂದು ನೆಟ್ಟಿಗರು ನೆನಪಿಸುತ್ತಿದ್ದಾರೆ. ಬೇರೆ ರಾಜ್ಯಗಳಿಂದ ಬಂದವರಿಗೆ ಉದ್ಯೋಗ, ವ್ಯಾಪಾರ ಮತ್ತು ನೆಮ್ಮದಿಯ ಜೀವನೋಪಾಯಕ್ಕೆ ಮುಕ್ತ ಅವಕಾಶ ನೀಡಿರುವ ಈ ನೆಲದಲ್ಲಿ, ಸ್ಥಳೀಯ ಭಾಷೆಯ ಸ್ಥಾನಮಾನವನ್ನೇ ಪ್ರಶ್ನಿಸುವುದು ದುರಹಂಕಾರದ ಪರಮಾವಧಿ ಎಂದು ಆಕ್ಷೇಪಿಸಲಾಗಿದೆ.
ಯಾವುದೇ ಭಾಷಾ ಸಮಸ್ಯೆಗಳಿಗೆ ಸಂವಾದ, ಪರಸ್ಪರ ಗೌರವ, ಮತ್ತು ಸಹಬಾಳ್ವೆಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕೇ ಹೊರತು, ನಗರದ ಆಡಳಿತಾತ್ಮಕ ಸ್ಥಾನಮಾನವನ್ನೇ ಬದಲಿಸುವಂತಹ ವಿವಾದಾತ್ಮಕ ಬೇಡಿಕೆಗಳನ್ನು ಮುಂದಿಡುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮತ್ತು ರಾಜ್ಯದ ಹಿತಾಸಕ್ತಿಗೆ ಮಾರಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಬೇಕೆಂಬ ಕೆಲವರ ಈ ಬೇಡಿಕೆ ಕನ್ನಡಿಗರ ಅಸ್ಮಿತೆ, ಸ್ಥಳೀಯರ ಹಕ್ಕು ಮತ್ತು ಭಾಷಾ ಸಾಮರಸ್ಯದ ಕುರಿತಾದ ಚರ್ಚೆಗೆ ಮತ್ತೊಮ್ಮೆ ದೊಡ್ಡ ಮಟ್ಟದ ಕಿಡಿ ಹೊತ್ತಿಸಿದೆ.