ಬೆಂಗಳೂರು: ನ್ಯಾಯಾಲಯದ ಕಲಾಪಗಳ ಆರ್ಕೈವ್ ಮಾಡಲಾದ ಆಡಿಯೋ-ವಿಡಿಯೋ ದಾಖಲೆಗಳ ಪ್ರತಿಗಳನ್ನು ಪಡೆಯಲು ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು, 2021ರ ನಿಯಮ 8 ಮತ್ತು 10ರ ಪ್ರಕಾರ ಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ಅದರ ನಕಲು ಪ್ರತಿಗಳನ್ನು ಪಡೆಯುವ ಹಕ್ಕನ್ನು ಅರ್ಜಿದಾರರು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹೈಕೋರ್ಟ್ ಕಲಾಪದ ಆಡಿಯೋ-ವಿಡಿಯೋ ತುಣುಕುಗಳನ್ನು ಒದಗಿಸುವಂತೆ ಕೋರಿ ಥಣಿಸಂದ್ರದ ಸತ್ಯನಾರಾಯಣಸ್ವಾಮಿ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ನಿಯಮ 10ರ ಪ್ರಕಾರ ನ್ಯಾಯಾಲಯವು ನಿರ್ದಿಷ್ಟವಾಗಿ ಆದೇಶಿಸದ ಹೊರತು, ಸದರಿ ರೆಕಾರ್ಡಿಂಗ್ಗಳ ಪ್ರತಿಗಳನ್ನು ಕೋರುವ ಯಾವುದೇ ಹಕ್ಕನ್ನು ಈ ನಿಯಮಗಳು ಒದಗಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸಂಬಂಧಪಟ್ಟ ನ್ಯಾಯಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ಕಲಾಪಗಳ ರೆಕಾರ್ಡಿಂಗ್ ಡೇಟಾ ನ್ಯಾಯಾಲಯದ ಅಧಿಕೃತ ದಾಖಲೆಯಾಗುವುದಿಲ್ಲ. ಪೀಠದ ಸ್ಪಷ್ಟ ನಿರ್ದೇಶನವಿಲ್ಲದೆ ಕಲಾಪಗಳ ವಿಡಿಯೋ ಪ್ರತಿಗಳನ್ನು ತಮಗೆ ನೀಡಬೇಕು ಎಂದು ಅರ್ಜಿದಾರರು ಕಾನೂನಾತ್ಮಕ ಹಕ್ಕು ಸಾಧಿಸಲು ಬರುವುದಿಲ್ಲ ಎಂದು ತಿಳಿಸಲಾಗಿದೆ. ಅಲ್ಲದೆ, ಹೈಕೋರ್ಟ್ನಿಂದ ಅಧಿಕಾರ ಪಡೆದ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊರತುಪಡಿಸಿ, ಮುದ್ರಣ ಮಾಧ್ಯಮ, ಎಲೆಕ್ಟ್ರಾನಿಕ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣಗಳು ಸೇರಿದಂತೆ ಬೇರೆ ಯಾರೂ ನ್ಯಾಯಾಲಯದ ನೇರ ಪ್ರಸಾರ ಅಥವಾ ರೆಕಾರ್ಡಿಂಗ್ಗಳನ್ನು ಮರು-ಪ್ರಸಾರ ಮಾಡುವಂತಿಲ್ಲ ಎಂದು ಪೀಠ ಎಚ್ಚರಿಸಿದ್ದು, ನಿಯಮ ಉಲ್ಲಂಘಿಸಿದರೆ ಕೃತಿಸ್ವಾಮ್ಯ ಕಾಯ್ದೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಬಹುದಾಗಿದೆ ಎಂದು ತಿಳಿಸಿದೆ.