image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಷ್ಟ್ರ ನಿರ್ಮಾಣದಲ್ಲಿ ದಕ್ಷಿಣ ಭಾರತದ ಕ್ರೈಸ್ತರ ಕೊಡುಗೆ ಅನನ್ಯ: ಸೇಂಟ್ ಜೋಸೆಫ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ರಾಷ್ಟ್ರ ನಿರ್ಮಾಣದಲ್ಲಿ ದಕ್ಷಿಣ ಭಾರತದ ಕ್ರೈಸ್ತರ ಕೊಡುಗೆ ಅನನ್ಯ: ಸೇಂಟ್ ಜೋಸೆಫ್ ವಿವಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

ಬೆಂಗಳೂರು: ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ದಕ್ಷಿಣ ಭಾರತದ ಕ್ರೈಸ್ತ ಸಮುದಾಯ ನೀಡಿದ ಕೊಡುಗೆ ಮಹತ್ವದ್ದಾಗಿದ್ದರೂ, ಅದು ಸಾರ್ವಜನಿಕ ನೆನಪಿನಿಂದ ಮರೆಯಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಧರ್ಮ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ (CRC) ವತಿಯಿಂದ "ರಾಷ್ಟ್ರ ನಿರ್ಮಾಣದಲ್ಲಿ ಕ್ರೈಸ್ತ ಧ್ವನಿಗಳು: ದಕ್ಷಿಣ ಭಾರತದಿಂದ ಮರೆತುಹೋದ ಇತಿಹಾಸಗಳು" ಎಂಬ ವಿಷಯದ ಕುರಿತು ಅಕ್ಟೋಬರ್ 17 ರಂದು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಮಹಾಧರ್ಮಕ್ಷೇತ್ರದ ಸಹಾಯಕ ಬಿಷಪ್ ಅತಿ ವಂದನೀಯ ಡಾ. ಅರೋಕಿಯರಾಜ್ ಸತೀಶ್ ಕುಮಾರ್, ದೇಶಕ್ಕೆ ಬಲವಾದ ಅಡಿಪಾಯ ಹಾಕುವಲ್ಲಿ ಕ್ರೈಸ್ತ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಗಳ ಪಾತ್ರ ಹಿರಿದು ಎಂದರು. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ. ಎಸ್. ಜಾಫೆಟ್ ಅವರು ಸಂಸ್ಥೆಗಳ ಜೊತೆಗೆ ಮಲೆನಾಡು, ಮಂಗಳೂರು, ಕಲ್ಯಾಣ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಕ್ರೈಸ್ತ ಧರ್ಮ ಬೀರಿದ ಸಾಮಾಜಿಕ ಪ್ರಭಾವ ಹಾಗೂ ಸಮುದಾಯಗಳ ಇತಿಹಾಸವನ್ನು ಅಧ್ಯಯನ ಮಾಡುವ ಅಗತ್ಯವನ್ನು ಪ್ರತಿಪಾದಿಸಿದರು.

ಮುಖ್ಯ ಭಾಷಣ ಮಾಡಿದ ಗಾಂಧಿವಾದಿ ವಿದ್ವಾಂಸ ರಾಯಭಾರಿ ಪಾಸ್ಕಲ್ ಅಲನ್ ನಜರತ್ ಅವರು ಸಂವಿಧಾನ ರಚನಾ ಸಭೆಯಲ್ಲಿದ್ದ ಫಾ. ಜೆರೋಮ್ ಡಿಸೋಜಾ ಎಸ್‌ಜೆ ಹಾಗೂ ಮಹಾತ್ಮ ಗಾಂಧಿಯವರ ಒಡನಾಡಿ ರಾಜಕುಮಾರಿ ಅಮೃತ್ ಕೌರ್ ಅವರ ಸೇವೆಯನ್ನು ಸ್ಮರಿಸಿದರು. ಸಿಆರ್‌ಸಿ ನಿರ್ದೇಶಕ ಡಾ. (ಫಾ.) ಬಾಲಕಿರಣ್ ಕುಮಾರ್ ಹೃದಯರಾಜ್ ಎಸ್‌ಜೆ ಅವರು ಸ್ವಾಗತಿಸಿ, ಇತಿಹಾಸವನ್ನು ನೆನಪಿನಲ್ಲಿಟ್ಟುಕೊಳ್ಳುವ ಮಹತ್ವವನ್ನು ವಿವರಿಸಿದರು.

ವಿವಿಧ ಗೋಷ್ಠಿಗಳಲ್ಲಿ ಪ್ರೊ. ಚೆರಿಯನ್ ಅಲೆಕ್ಸಾಂಡರ್, ಡಾ. (ಫಾ.) ಜೋಸ್ ಕಲಾಪುರ ಎಸ್‌ಜೆ, ಡಾ. ಜೋಶಿ ಮ್ಯಾಥ್ಯೂ, ಡಾ. ಡೆನಿಸ್ ಫೆರ್ನಾಂಡಿಸ್, ನ್ಯಾಯವಾದಿ ಫ್ಲೇವಿಯಾ ಆಗ್ನೆಸ್, ಪ್ರೊ. ಡಿ. ಮನೋಹರ್ ಚಂದ್ರಪ್ರಸಾದ್, ಡಾ. ರೂತ್ ಮನೋರಮಾ ಹಾಗೂ ಪ್ರೊ. ಬಾಬು ಮ್ಯಾಥ್ಯೂ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಕ್ರೈಸ್ತರ ಪಾಲ್ಗೊಳ್ಳುವಿಕೆ, ಜಾರ್ಜ್ ಫೆರ್ನಾಂಡಿಸ್ ಅವರ ಕಾರ್ಮಿಕ ಸಂಘಟನೆ ಹಾಗೂ ತುರ್ತು ಪರಿಸ್ಥಿತಿ ವಿರುದ್ಧದ ಪಯಣ, ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಆಯೋಗದ ಶಿಫಾರಸು, ಚರ್ಚ್‌ಗಳೊಳಗಿನ ಸುಧಾರಣೆಗಳು ಮತ್ತು ಸರ್ವಾಧಿಕಾರಿ ಧೋರಣೆಗಳ ವಿರುದ್ಧದ ಎಚ್ಚರಿಕೆಗಳ ಕುರಿತು ಗಹನವಾದ ಚರ್ಚೆಗಳು ನಡೆದವು.

ಸಮಾರೋಪ ಭಾಷಣದಲ್ಲಿ ಸಾಂಸ್ಕೃತಿಕ ವಿಮರ್ಶಕ ಪ್ರೊ. ಎನ್. ಮನು ಚಕ್ರವರ್ತಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮತ್ತು ವಿಮರ್ಶೆಗಳನ್ನು ಸ್ವೀಕರಿಸುವ ಗುಣ ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟರು. ಡಾ. ಜೇನ್ ಡಿಸೋಜಾ ವಂದನಾರ್ಪಣೆ ನೆರವೇರಿಸಿದರು.

Category
ಕರಾವಳಿ ತರಂಗಿಣಿ