ಸಾಗರ: ಸರ್ಕಾರ ಮತ್ತು ಜನರ ನಡುವೆ ಸಂಪರ್ಕ ಸೇತುವೆಯಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕರೆ ನೀಡಿದ್ದಾರೆ. ಸಾಗರ ತಾಲೂಕಿನ ಆನಂದಪುರದ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಜಾಸೇವೆಯ ಮೂಲ ಉದ್ದೇಶ ಜನರ ಕಲ್ಯಾಣ ಮತ್ತು ಸರ್ಕಾರದ ಸೇವೆಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸುವುದಾಗಿದೆ ಎಂದರು. ಕಸ್ತೂರಿ ರಂಗನ್ ವರದಿ ಹಾಗೂ ಅರಣ್ಯ ಕಾಯ್ದೆಗಳ ಕುರಿತು ಮಾತನಾಡಿ, ಇಂತಹ ಸಂದರ್ಭದಲ್ಲಿ ಸರ್ಕಾರವು ರೈತರ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಅಲ್ಲದೆ, ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಸದಾಶಯವಿದ್ದು, ಸಾಗರ ತಾಲೂಕಿನಲ್ಲಿ ಸುಮಾರು 8,000 ಜನರಿಗೆ ನಿವೇಶನ ಕೊಡಿಸುವ ಗುರಿ ಹೊಂದಲಾಗಿದೆ ಎಂದರು. ಸಭೆಯಲ್ಲಿ ಸಾರ್ವಜನಿಕರಿಂದ ಕುಡಿಯುವ ನೀರು, ಹಕ್ಕುಪತ್ರ, ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಅರ್ಜಿಗಳನ್ನು ಸ್ವೀಕರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಇಓ ರಿಷಿ ಆನಂದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಹಸ್ರಾರು ಗ್ರಾಮಸ್ಥರು ಉಪಸ್ಥಿತರಿದ್ದರು.