image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕುವೆಂಪು ವಿವಿ ಎದುರು ಬಿ.ಎಡ್ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ: ಶೀಘ್ರ ಫಲಿತಾಂಶ ಪ್ರಕಟಕ್ಕೆ ಕುಲಪತಿ ಭರವಸೆ

ಕುವೆಂಪು ವಿವಿ ಎದುರು ಬಿ.ಎಡ್ ವಿದ್ಯಾರ್ಥಿಗಳ ತೀವ್ರ ಪ್ರತಿಭಟನೆ: ಶೀಘ್ರ ಫಲಿತಾಂಶ ಪ್ರಕಟಕ್ಕೆ ಕುಲಪತಿ ಭರವಸೆ

ಶಿವಮೊಗ್ಗ: ಬಿ.ಎಡ್ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಉಂಟಾಗಿರುವ ವಿಳಂಬ ಹಾಗೂ ಶೈಕ್ಷಣಿಕ ಗೊಂದಲಗಳನ್ನು ಖಂಡಿಸಿ, ಸಾಗರದ ಗಂಗೋತ್ರಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ನಡೆಯುತ್ತಿರುವ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಮೀಪಿಸುತ್ತಿದ್ದು, ಕೂಡಲೇ ಫಲಿತಾಂಶ ನೀಡದಿದ್ದರೆ ವಿಶ್ವವಿದ್ಯಾಲಯದ ಅಂಗಳದಲ್ಲೇ ಸಾಮೂಹಿಕವಾಗಿ ಪ್ರಾಣತ್ಯಾಗ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ವಿವಿಧ ಬ್ಯಾಚ್‌ಗಳ ಶೈಕ್ಷಣಿಕ ಸಮಸ್ಯೆಗಳನ್ನು ಮುನ್ನೆಲೆಗೆ ತಂದರು. 2023-24ನೇ ಸಾಲಿನ ಬ್ಯಾಚ್‌ನ 3 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗಳು ಮುಗಿದು ತಿಂಗಳುಗಳು ಕಳೆದರೂ ಫಲಿತಾಂಶ ಪ್ರಕಟವಾಗಿಲ್ಲ. 2024-25ನೇ ಸಾಲಿನ ಬ್ಯಾಚ್‌ನ 1, 2 ಮತ್ತು 3ನೇ ಸೆಮಿಸ್ಟರ್ ಫಲಿತಾಂಶಗಳು ಬಾಕಿಯಿದ್ದರೆ, 2025-26ನೇ ಬ್ಯಾಚ್‌ನ ಪ್ರಥಮ ಸೆಮಿಸ್ಟರ್ ಪರೀಕ್ಷೆ ನಡೆದಿದ್ದರೂ ಕೋರ್ಸ್‌ಗೆ ಅಧಿಕೃತ ಮಾನ್ಯತೆಯೇ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪರೀಕ್ಷಾಂಗ ಕುಲಸಚಿವ ತಿಮ್ಮರಾಯಪ್ಪ, ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಪೋರ್ಟಲ್‌ನಲ್ಲಿ ತಾಂತ್ರಿಕ ತೊಂದರೆಯಿಂದ ಲಾಗಿನ್ ಆಗುತ್ತಿಲ್ಲ, ಈ ಬಗ್ಗೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ನಿಮ್ಮ ಆಡಳಿತಾತ್ಮಕ ವೈಫಲ್ಯಕ್ಕೆ ನಮ್ಮ ಭವಿಷ್ಯವನ್ನು ಬಲಿ ಕೊಡುತ್ತಿದ್ದೀರಾ ಎಂದು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳಕ್ಕೆ ಧಾವಿಸಿದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅವರು ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಮುಖ್ಯಸ್ಥ ಕೃಷ್ಣಮೂರ್ತಿ ಅವರೊಂದಿಗೆ ನೇರ ಮಾತುಕತೆ ನಡೆಸಿದರು. ಶಿಕ್ಷಕರ ನೇಮಕಾತಿಯ ಅವಕಾಶ ಕೈತಪ್ಪದಂತೆ ತಕ್ಷಣವೇ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ UUCMS ತಾಂತ್ರಿಕ ಅಡಚಣೆ ಬಗೆಹರಿಸಲಾಗುವುದು, ಬಾಕಿ ಫಲಿತಾಂಶ ಹಾಗೂ ಮಾನ್ಯತೆಯ ಗೊಂದಲಗಳನ್ನು ತ್ವರಿತವಾಗಿ ಇಲಾಖಾ ಮಟ್ಟದಲ್ಲಿ ಪರಿಹರಿಸಲಾಗುವುದು ಎಂದು ಕುಲಪತಿಗಳು ಆಶ್ವಾಸನೆ ನೀಡಿದರು. ಈ ಖಚಿತ ಭರವಸೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧರಣಿಯನ್ನು ಹಿಂಪಡೆದರು.

ತಾಂತ್ರಿಕ ಅಡಚಣೆಯನ್ನು ಶೀಘ್ರವೇ ಪರಿಹರಿಸಿ ಪೂರ್ಣ ಫಲಿತಾಂಶ ಪ್ರಕಟಿಸುವುದು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ ಎಂದು ಕುಲಪತಿ ಡಾ. ಶರತ್ ಅನಂತಮೂರ್ತಿ ತಿಳಿಸಿದರೆ, ಶೀಘ್ರವೇ ಫಲಿತಾಂಶ ನೀಡಿ ನ್ಯಾಯ ಒದಗಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ವಿದ್ಯಾರ್ಥಿ ಅಶ್ವತ್ ಎಚ್ಚರಿಸಿದರು. ನ್ಯಾಯಾಲಯದ ನಿರ್ದೇಶನಗಳಿದ್ದರೂ ವಿಶ್ವವಿದ್ಯಾಲಯವು ಫಲಿತಾಂಶ ಮತ್ತು ಮಾನ್ಯತೆ ನೀಡಲು ಅನಗತ್ಯ ವಿಳಂಬ ಮಾಡುತ್ತಿದೆ ಎಂದು ಕಾಲೇಜಿನ ಮುಖ್ಯಸ್ಥ ಕೃಷ್ಣಮೂರ್ತಿ ಆರೋಪಿಸಿದರು.

Category
ಕರಾವಳಿ ತರಂಗಿಣಿ