ಬೆಂಗಳೂರು: ರಾಜ್ಯದ ಅಗ್ನಿವೀರರ ಭವಿಷ್ಯಕ್ಕೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀತಿ ರೂಪಿಸಬೇಕು ಹಾಗೂ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿ ಪ್ರತಿ ತಿಂಗಳ 5ರೊಳಗೆ ತಪ್ಪದೆ ಸಂಬಳ ಪಾವತಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆಯಲಾಗಿದೆ.
2027ರ ಆರಂಭದಲ್ಲಿ ಕರ್ನಾಟಕದ ಸಾವಿರಾರು ಅಗ್ನಿವೀರರು ಸೇವೆ ಪೂರ್ಣಗೊಳಿಸಿ ರಾಜ್ಯಕ್ಕೆ ಮರಳಲಿದ್ದು, ಇವರ ಉದ್ಯೋಗ ಮತ್ತು ಭವಿಷ್ಯದ ಕುರಿತು ರಾಜ್ಯ ಸರ್ಕಾರವು ತಕ್ಷಣವೇ ಸ್ಪಷ್ಟ ನೀತಿಯನ್ನು ರೂಪಿಸಬೇಕು. ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳು ಅಗ್ನಿವೀರರಿಗೆ ಶೇ.10 ರಿಂದ ಶೇ.20ರಷ್ಟು ಮೀಸಲಾತಿ ಕಲ್ಪಿಸಿವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪೊಲೀಸ್, ಅರಣ್ಯ, ಕಾರಾಗೃಹ ಹಾಗೂ ಅಗ್ನಿಶಾಮಕ ಇಲಾಖೆಗಳಲ್ಲಿ ಅಗ್ನಿವೀರರಿಗೆ ವಿಶೇಷ ಮೀಸಲಾತಿ ಅಥವಾ ಆದ್ಯತೆ ನೀಡುವ ಮೂಲಕ ಅವರ ಸೇವೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಇದೇ ವೇಳೆ, ಜಲ್ ಜೀವನ್ ಮಿಷನ್, ಇ-ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳಡಿ ಗ್ರಾಮೀಣ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಮೂರರಿಂದ ಐದು ತಿಂಗಳಿಂದ ವೇತನ ಪಾವತಿಯಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಸಾವಿರಾರು ಸಿಬ್ಬಂದಿ ಸಂಬಳವಿಲ್ಲದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದು, ಇದು ಆಡಳಿತ ವ್ಯವಸ್ಥೆಯ ಗಂಭೀರ ಲೋಪವಾಗಿದೆ. ಆದ್ದರಿಂದ ರಾಜ್ಯದ ಎಲ್ಲಾ ಇಲಾಖೆಗಳ ಗುತ್ತಿಗೆ ನೌಕರರಿಗೆ ಅನ್ವಯವಾಗುವಂತೆ ಏಕರೂಪದ ಕನಿಷ್ಠ ವೇತನ ಮಾರ್ಗಸೂಚಿ ರೂಪಿಸಿ, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಖಚಿತವಾಗಿ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.