ಹಾವೇರಿ: ಸಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯಾರನ್ನೇ ಅಭ್ಯರ್ಥಿ ಮಾಡಿದರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಮಗೆ ನೇರ ಎದುರಾಳಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶಿಗ್ಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಭರತ್ ಬೊಮ್ಮಾಯಿಗೆ ನನಗಿಂತ ಹೆಚ್ಚಿನ ದೊಡ್ಡ ಬೆಂಬಲ ದೊರೆಯುತ್ತದೆ. ದೊಡ್ಡ ಅಂತರದಲ್ಲಿ ಭರತ್ ಗೆಲ್ಲುವ ವಿಶ್ವಾಸ ಇದೆ. ಈ ಬಾರಿ ನಮಗೆ ಅತಿ ಹೆಚ್ಚು ಜನ ಬೆಂಬಲ ದೊರೆಯುತ್ತದೆ. ಭರತ ಬೊಮ್ಮಾಯಿ ನನಗಿಂತ ಹೆಚ್ಚು ಮತ ಪಡೆಯುತ್ತಾರೊ ಇಲ್ಲವೊ ಎಂದು ನಾನು ಭವಿಷ್ಯ ಹೇಳುವುದಿಲ್ಲ. ಆದರೆ, ಅತಿ ಹೆಚ್ಚು ಅಂತರದಿಂದ ಗೆಲುವು ಸಾಧಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಶಿಗ್ಗಾವಿ, ಸಂಡೂರು ಬಿಜೆಪಿ ಗೆಲ್ಲುತ್ತದೆ. ಚನ್ನಪಟ್ಟಣವನ್ನೂ ಎನ್ ಡಿಎ ಗೆಲ್ಲುತ್ತದೆ ಎಂದರು.
ಕ್ಷೇತ್ರದಲ್ಲಿ ಅಸಮಾಧಾನ ಇರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕ್ಷೇತ್ರದಲ್ಲಿ ಯಾವುದೆ ಅಸಮಾಧಾನ ಇಲ್ಲ. ನಾನು ಚುನಾವಣೆ ಮಾಡುವಾಗ ಸಣ್ಣಪುಟ್ಟ ಅಸಮಾಧಾನ ಇತ್ತು. ಈಗ ಭರತ್ ಬೊಮ್ಮಾಯಿ ಸ್ಪರ್ಧೆ ಮಾಡುವಾಗ ಯಾವುದೇ ಭಿನ್ನಮತ ಇಲ್ಲ ಎಂದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ನಿಂತರೂ ಗೆಲ್ಲುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರೀಯಿಸಿದ ಅವರು, ಅವರಿಗೆ ಸರಿಯಾದ ಕಾಂಗ್ರೇಸ್ ನಲ್ಲಿ ಅಭ್ಯರ್ಥಿ ಹುಡುಕಲಿಕ್ಕೆ ಆಗಲಿಲ್ಲ ಇದರ ಮೇಲೆ ನೀವೆ ಅರ್ಥ ಮಾಡಿಕೊಳ್ಳಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.