image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹ: ಅ.12ರಿಂದ ಎರಡನೇ ಹಂತದ ಹೋರಾಟ

ಶಿವಮೊಗ್ಗದಲ್ಲೇ ಹೈಕೋರ್ಟ್ ಸಂಚಾರಿ ಪೀಠಕ್ಕೆ ಆಗ್ರಹ: ಅ.12ರಿಂದ ಎರಡನೇ ಹಂತದ ಹೋರಾಟ

ಶಿವಮೊಗ್ಗ : ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಪರಿಶೀಲನಾ ಸಮಿತಿ ರಚಿಸಿರುವುದು ಕಣ್ಣೊರೆಸುವ ತಂತ್ರ ಎಂದು ಆರೋಪಿಸಿರುವ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ, ಮಧ್ಯ ಕರ್ನಾಟಕದ ಜನರ ಅನುಕೂಲಕ್ಕಾಗಿ ಶಿವಮೊಗ್ಗದಲ್ಲಿಯೇ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಒತ್ತಾಯಿಸಿ ಅಕ್ಟೋಬರ್ 12ರಿಂದ ಎರಡನೇ ಹಂತದ ಉಗ್ರ ಹೋರಾಟ ಆರಂಭಿಸುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವ್ಯಾಪ್ತಿಗೆ ಶಿವಮೊಗ್ಗವನ್ನು ಸೇರಿಸುವುದನ್ನು ತೀವ್ರವಾಗಿ ವಿರೋಧಿಸಿದ್ದು, ಈ ಹಿಂದಿನಂತೆ ಈ ಬಾರಿಯೂ ಸುಮಾರು 49ಕ್ಕೂ ಹೆಚ್ಚು ವಿವಿಧ ಸಂಘ-ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು. ಶಿವಮೊಗ್ಗ ಜಿಲ್ಲಾ ವಕೀಲರ ಭವನದ ಮುಂದೆ ಹಾಗೂ ಎಲ್ಲಾ ತಾಲೂಕು ವಕೀಲರ ಸಂಘಗಳ ನೇತೃತ್ವದಲ್ಲಿ ಧರಣಿ ಹಾಗೂ ಸತ್ಯಾಗ್ರಹಗಳು ನಡೆಯಲಿವೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಿರುವಷ್ಟು ಕಾನೂನು ಪ್ರಕರಣಗಳಿದ್ದು, ಹೋರಾಟದ ಫಲವಾಗಿ ರಚನೆಯಾಗಿರುವ ಮೂವರು ನ್ಯಾಯಮೂರ್ತಿಗಳ ಸಮಿತಿ ಶಿವಮೊಗ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಹೋರಾಟದ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. 1950ರಲ್ಲೇ ಶಿವಮೊಗ್ಗದಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಈ ಬೇಡಿಕೆಯನ್ನು ಮೊದಲಿಗೆ ಮಂಡಿಸಲಾಗಿತ್ತು ಎಂಬುದನ್ನು ಅವರು ನೆನಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್. ಜಗದೀಶ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಸಿ. ಯೋಗೀಶ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ, ಗೋಪಿನಾಥ್, ಎನ್. ಮಂಜುನಾಥ, ವೈದ್ಯನಾಥ ಸೇರಿದಂತೆ ವಿವಿಧ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ