ಬೆಂಗಳೂರು: "ಸರ್ಕಾರಗಳು ಏನೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ, ಸಮಾಜಕ್ಕೆ ಸಂಸ್ಕಾರ ನೀಡುವ ಗುರುಗಳ ಹಾಗೂ ಗುರುಮಠಗಳ ಕೊಡುಗೆ ಅತ್ಯಂತ ಸ್ತುತ್ಯಾರ್ಹವಾದದ್ದು. ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನವಿಲ್ಲದೆ ಜೀವನದಲ್ಲಿ ಒಂದು ಹೆಜ್ಜೆಯನ್ನೂ ಮುನ್ನಿಡಲು ಸಾಧ್ಯವಿಲ್ಲ. ಮಠಾಧೀಶರು ನಾಡಿನಲ್ಲಿ ಅಕ್ಷರ, ಅನ್ನ ಮತ್ತು ಧರ್ಮ ದಾಸೋಹವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯತಾ ಪೀಠವಾದ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ 25ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗವು ಗೃಹ ಕಚೇರಿ 'ಕೃಷ್ಣಾ'ದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು. ಈ ವೇಳೆ ಅವರನ್ನು ಉದ್ದೇಶಿಸಿ ಶನಿವಾರ ಸಭೆಯಲ್ಲಿ ಸಿಎಂ ಮಾತನಾಡಿದರು.
ತಮ್ಮ ಸುದೀರ್ಘ ಭಾಷಣದಲ್ಲಿ ಧಾರ್ಮಿಕ ಒಗ್ಗಟ್ಟು ಮತ್ತು ಸೌಹಾರ್ದತೆಯ ಕುರಿತು ಮಾತನಾಡಿದ ಅವರು, "ಹಿಂದೆ ವೀರಶೈವ-ಲಿಂಗಾಯತ ಸಮುದಾಯವನ್ನು ವಿಭಜಿಸುವ ಪ್ರಯತ್ನ ನಡೆದಾಗ ನಾನು ಧರ್ಮದ ಗುರುಗಳ ಕ್ಷಮೆ ಕೇಳಿದ್ದೆ. ನಮ್ಮ ಸರ್ಕಾರ ಹಾಗೂ ನಮ್ಮ ಧರ್ಮ ಸಮಾಜವನ್ನು ಸೂಜಿಯಂತೆ ಒಗ್ಗೂಡಿಸುವ ಮತ್ತು ಹೊಲಿಯುವ ಕೆಲಸ ಮಾಡುತ್ತದೆಯೇ ಹೊರತು, ಕತ್ತರಿಯಂತೆ ಕತ್ತರಿಸಿ ವಿಭಜಿಸುವುದಿಲ್ಲ. ಒಗ್ಗಟ್ಟಿನಲ್ಲಿಯೇ ನೈಜ ಶಕ್ತಿಯಿದೆ" ಎಂದರು.
ತಮ್ಮ ಧಾರ್ಮಿಕ ನಂಬಿಕೆಗಳನ್ನು ಮೆನವರಿಸಿದ ಮುಖ್ಯಮಂತ್ರಿಗಳು, "ಬಾಳೆಹೊನ್ನೂರು ಶ್ರೀಮಠ ಸೇರಿದಂತೆ ಅನೇಕ ಧಾರ್ಮಿಕ ಪೀಠಗಳಿಗೆ ಭೇಟಿ ನೀಡಿ ಅಲ್ಲಿನ ಆಚಾರ-ವಿಚಾರಗಳನ್ನು ಗೌರವಿಸಿದ್ದೇನೆ. ನಾನು ಪ್ರಮಾಣವಚನ ಸ್ವೀಕರಿಸುವಾಗ ವೀರ ಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಪ್ರಮಾಣ ಮಾಡಿದ್ದು ದೇಶದ ಪ್ರಮುಖ ನಾಯಕರ ಗಮನ ಸೆಳೆದಿತ್ತು. ಹಿಂದೆ ಚೆನ್ನೈ ಆಸ್ಪತ್ರೆಯಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದಾಗ, ಮಾನವೀಯತೆಯೇ ನಿಜವಾದ ಧರ್ಮ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಹಲವರು ನನ್ನನ್ನು ಟೀಕಿಸಿದರೂ ನಾನು ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ದಸರಾ ಮಹೋತ್ಸವದ ಉದ್ಘಾಟನೆ ವಿಚಾರದಲ್ಲಿ ಹರಡಿದ ವದಂತಿಗಳಿಗೆ ತೆರೆ ಎಳೆದ ಸಿಎಂ, "ಕೊಪ್ಪಳದ ಗವಿಮಠದ ಶ್ರೀಗಳ ದೊಡ್ಡ ವ್ಯಕ್ತಿತ್ವ ಹಾಗೂ ಸಮಾಜಮುಖಿ ಕೆಲಸಗಳನ್ನು ಇಡೀ ರಾಜ್ಯ ಗೌರವಿಸುತ್ತದೆ. ಅವರ ಜೊತೆ ಚರ್ಚಿಸಿಯೇ ಮೈಸೂರು ದಸರಾ ಉದ್ಘಾಟನೆಗೆ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಶ್ರೀಗಳೂ ಧನಾತ್ಮಕವಾಗಿ ಒಪ್ಪಿಗೆ ಸೂಚಿಸಿದ್ದರು. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀಗಳು ಉದ್ಘಾಟನೆಗೆ ಒಪ್ಪಿಲ್ಲವೆಂದು ಸುಳ್ಳು ಸುದ್ದಿ ಹರಡಿ ರಾಜಕೀಯ ಮಾಡಲು ಯತ್ನಿಸಿದರು" ಎಂದು ಬೇಸರ ವ್ಯಕ್ತಪಡಿಸಿದರು.
ಕೊನೆಯಲ್ಲಿ, "ನನಗೆ ಸಿಕ್ಕಿರುವ ಅಧಿಕಾರದ ಅವಕಾಶದಲ್ಲಿ ಜನರ ಹೃದಯ ಗೆದ್ದು ಸತ್ಕಾರ್ಯ ಮಾಡುವುದೇ ನನ್ನ ಪ್ರಮುಖ ಗುರಿ. ಪೂಜ್ಯ ಗುರುಗಳು ನೀಡಿದ ಆಶೀರ್ವಾದ ನನ್ನೊಬ್ಬನಿಗೆ ಮಾತ್ರವಲ್ಲದೆ ಇಡೀ ಸರ್ಕಾರಕ್ಕೆ ಶ್ರೀರಕ್ಷೆಯಾಗಿದೆ. ನಿಮ್ಮ ಸಹಕಾರ ಮತ್ತು ಮಾರ್ಗದರ್ಶನ ಹೀಗೆಯೇ ಮುಂದುವರಿಯಲಿ" ಎಂದು ಸ್ವಾಮೀಜಿಗಳಿಗೆ ಧನ್ಯವಾದ ಸಲ್ಲಿಸಿದರು.