image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ವಿಭಾಗ ಮಟ್ಟದ ವಾಲಿಬಾಲ್: ದಾವಣಗೆರೆ, ಬೆಂಗಳೂರು ಸೆಂಟ್ರಲ್ ಚಾಂಪಿಯನ್

ವಿಭಾಗ ಮಟ್ಟದ ವಾಲಿಬಾಲ್: ದಾವಣಗೆರೆ, ಬೆಂಗಳೂರು ಸೆಂಟ್ರಲ್ ಚಾಂಪಿಯನ್

ಶಿವಮೊಗ್ಗ : ನಗರದ ನೆಹರೂ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಉಪ ನಿರ್ದೇಶಕರ ಕಚೇರಿ ಶಿವಮೊಗ್ಗ, ಶ್ರೀ ಮಹಾವೀರ ವಿದ್ಯಾ ಸಂಸ್ಥೆ ಹಾಗೂ ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ಬೆಂಗಳೂರು ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಬಾಲಕರ ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ದಾಳಿ ಹಾಗೂ ರಕ್ಷಣಾತ್ಮಕ ಆಟದ ಪ್ರದರ್ಶನ ನೀಡಿದ ದಾವಣಗೆರೆ ಜಿಲ್ಲೆಯ ತಂಡವು ಜಿದ್ದಾಜಿದ್ದಿನ ಮೂರು ಸೆಟ್‌ಗಳ ಹೋರಾಟದಲ್ಲಿ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿತು. ಬೆಂಗಳೂರು ಉತ್ತರ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಬಾಲಕಿಯರ ವಿಭಾಗದ ಅಂತಿಮ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದ ಬೆಂಗಳೂರು ಸೆಂಟ್ರಲ್ ತಂಡವು ನೇರ ಎರಡು ಸೆಟ್‌ಗಳ ಅಂತರದಲ್ಲಿ ರಾಮನಗರ ಜಿಲ್ಲೆಯ ತಂಡವನ್ನು ಪರಾಭವಗೊಳಿಸಿ ಪ್ರಥಮ ಸ್ಥಾನ ಗಳಿಸಿತು. ರಾಮನಗರ ಜಿಲ್ಲೆ ದ್ವಿತೀಯ ಸ್ಥಾನ ಪಡೆಯಿತು. ಈ ಪಂದ್ಯಾವಳಿಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಗಳು ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದುಕೊಂಡಿವೆ.

ಸಮಾರೋಪ ಸಮಾರಂಭದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ. ಅವರು ಭಾಗವಹಿಸಿ ವಿಜೇತ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ಬಹುಮಾನ ವಿತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭೋಜೆಗೌಡ್ರ ಆಪ್ತ ಸಹಾಯಕ ಪರಶುರಾಮ್, ಜಿಲ್ಲಾ ಅನುದಾನ ರಹಿತ ಶಾಲಾ ಒಕ್ಕೂಟದ ಅಧ್ಯಕ್ಷ ಗಿರೀಶ್, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ರಮೇಶ್ ಬಾಬು, ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬಿ.ಹೆಚ್. ನಿರಂಜನ್ ಮೂರ್ತಿ, ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ. ತಿಮ್ಮೇನಹಳ್ಳಿ ಮಠಪತಿ, ರಘು ಹಾಗೂ ಸೋಮಶೇಖರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ